ಬಂಟ್ವಾಳ, ನ 02(SM): ಕಲ್ಲಡ್ಕದ ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಮತ್ತು ಶ್ರೀರಾಮ ಮಂದಿರ ಕಲ್ಲಡ್ಕ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರದ ಮುಂಭಾಗ ಶ್ರೀ ಅಯ್ಯಪ್ಪ ಸ್ವಾಮಿಯ ಶಬರಿಮಲೆ ಕ್ಷೇತ್ರ ಉಳಿಸಿ ಹೋರಾಟದ ಅಂಗವಾಗಿ ಭಜನೆ ಹಾಗೂ ಪ್ರತಿಭಟನಾ ಸಭೆ ನಡೆಯಿತು.
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಶಬರಿಮಲೆಯ ಸಾನಿಧ್ಯದ ಪಾವಿತ್ರ್ಯತೆಗೆ ಧಕ್ಕೆಯಾಗುವ ಸನ್ನಿವೇಶ ಒದಗಿ ಬಂದಿದೆ. ದೇಶಾದ್ಯಂತ ಇರುವ ಕೋಟ್ಯಾಂತರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರ ಭಾವನೆಗಳಿಗೆ ನೋವುಂಟಾಗಿದೆ. ತೀರ್ಪನ್ನು ಯಥಾವತ್ತಾಗಿ ಪಾಲಿಸುವ ಕೇರಳ ಸರಕಾರದ ಧೋರಣೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಜನೆ ಮತ್ತು ಸತ್ಯಾಗ್ರಹದ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮನವಿಗೆ ಸ್ಪಂದಿಸದೇ ಇದ್ದಲ್ಲಿ ತೀವ್ರ ಹೋರಾಟ ಮಾಡಬಹುದಾದ ಅನಿವಾರ್ಯತೆ ಎದುರಾಗ ಬಹುದೆಂದು ಹಿಂದೂ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತೀರ್ಪನ್ನು ವಿರೋಧಿಸಿ ಮಧ್ಯಾಹ್ನ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಪ್ರತಿಭಟನಾ ಸಭೆಯಲ್ಲಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿದರು. ಎಡಪಂಥೀಯ ಚಿಂತನೆಗಳಿರುವ ದೇವರನ್ನು ನಂಬದ ವ್ಯಕ್ತಿಗಳು ಇಂದು ಶಬರಿಮಲೆ ಕ್ಷೇತ್ರವನ್ನು ಅಪವಿತ್ರಗೊಳಿಸುವ ಹುನ್ನಾರ ನಡೆಸುತ್ತಿದ್ದು, ಇದು ಹಿಂದು ಧರ್ಮದ ಮೇಲೆ ನಡೆಯುತ್ತಿರುವ ದಾಳಿ ಎಂದು ಅವರು ಹೇಳಿದರು.