ಕಾರ್ಕಳ, ನ 02(SM): ಕಳೆದ ಕೆಲವು ದಿನಗಳಿಂದ ಬೈಲೂರು ಪರಿಸರದ ನಾಗರಿಕರಲ್ಲಿ ಭೀತಿಯನ್ನು ಮೂಡಿಸುತ್ತಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಬರೋಬ್ಬರಿ 13 ಅಡಿ ಉದ್ದದ ಹಾಗೂ 23 ಕೆ.ಜಿ. ಭಾರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಕಾರ್ಕಳದ ಅನಿಲ್ಪ್ರಭು ಸೆರೆ ಹಿಡಿದಿದ್ದು, ಮಾಳ ಪರಿಸರದ ಕುದುರೆಮುಖ ರಕ್ಷಿತಾರಣ್ಯ ಪ್ರದೇಶಕ್ಕೆ ಸೇರಿಸಿದ್ದಾರೆ.
ಬೈಲೂರು ಕೆಫೆ ಹೋಟೆಲ್ ಹಿಂಭಾಗದ ಜಯರಾಂ ಭಂಡಾರಿ ಎಂಬವರ ಹಿತ್ತಲಿನಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಕಳೆದ ಕೆಲವು ದಿನಗಳಿಂದ ಪರಿಸರದ ನಾಗರಿಕರನ್ನು ಬೆನ್ನಟ್ಟುತ್ತಿದ್ದ ಕಾಳಿಂಗ ಸರ್ಪದಿಂದಾಗಿ ಸ್ಥಳೀಯರು ಭಯಭೀತರಾಗಿದ್ದರು.
ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಅನಿಲ್ ಪ್ರಭು ಅವರಿಗೆ ನಾಲ್ಕು ಬಾರಿ ಕಾಳಿಂಗ ದಾಳಿಗೆ ಮುಂದಾಗಿತ್ತು. ಆದರೆ, ಚಾಕಚಾಕ್ಯತೆಯಿಂದ ಕಾಳಿಂಗನನ್ನು ಅನಿಲ್ ಪ್ರಭು ಸೆರೆಹಿಡಿದಿದ್ದು, ಅರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.
ಈ ಮೂಲಕ ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.