ಮಂಗಳೂರು, ನ 02(SM): ಸಿಆರ್ ಝೆಡ್ ಪ್ರದೇಶದಲ್ಲಿ ಒಂದು ವಾರದೊಳಗೆ ಪರವಾನಿಗೆ ನೀಡಿ ಮರಳುಗಾರಿಕೆ ಪ್ರಾರಂಭ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಮರಳು ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳನ್ನೇ ನೇಮಕ ಮಾಡಲಾಗಿದೆ. ಮರಳು ಮಾರಾಟ ದರವನ್ನು ಈ ಸಮಿತಿ ನಿರ್ಧರಿಸಬೇಕು.
ಜನರಿಗೆ ಕೈಗೆಟುವ ಬೆಲೆಯಲ್ಲಿ ಮರಳನ್ನು ಮಾರಾಟ ಮಾಡಬೇಕು. ಹೆಚ್ಚುವರಿ ದರ ವಿಧಿಸಿದರೆ ದೂರು ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಮರಳಿನ ಸಮಸ್ಯೆಯಿಂದಾಗಿ ಕಳೆದ ೨-೩ ತಿಂಗಳಿನಿಂದ ಹಲವಾರು ಕಾರ್ಮಿಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಇದರ ವಿರುದ್ಧ ತೀವ್ರ ಆಕ್ರೋಶಗಳು ಕೇಳಿ ಬರುತ್ತಿವೆ.
ಅಲ್ಲದೆ, ಮರಳುಗಾರಿಕೆ ಆರಂಭಿಸುವಂತೆ ಆಗ್ರಹಿಸಿ ನಾಳೆ ಬಿಜೆಪಿ ತಾಲೂಕು ಕೇಂದ್ರ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲಿದೆ.