ಮಂಗಳೂರು, ನ03(SS): ಈ ಹಿಂದೆ ಮೆಕ್ಕಾ ಯಾತ್ರೆ ಕೈಗೊಂಡಿದ್ದಾಗ ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಹರಕೆಯೊಂದನ್ನು ಹೇಳಿದ್ದು, ಈ ಹರಕೆಯ ಫಲವೇ ಅವರ ಪುತ್ರಿ ಧಾರ್ಮಿಕ ಶಿಕ್ಷಣದತ್ತ ಮುಖ ಮಾಡಲು ಕಾರಣ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಸಚಿವ ಖಾದರ್ ಅವರ ಪುತ್ರಿ ನಸೀಮಾ ಈ ಬಾರಿ ದುಬೈನಲ್ಲಿ ನಡೆಯುವ ಕುರಾನ್ ಕಂಠಪಾಠ ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾಳೆ.
ಕಳೆದ ಎಂಟು ವರ್ಷಗಳ ಹಿಂದೆ ಸಚಿವ ಖಾದರ್ ಮತ್ತು ಕುಟುಂಬ ಮೆಕ್ಕಾ ಯಾತ್ರೆ ಕೈಗೊಂಡಿದ್ದಾಗ ಮಗಳು ನಸೀಮಾ ನಾಪತ್ತೆಯಾಗಿದ್ದಳು. ಕಾಬಾದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಾಗ ಈ ಘಟನೆ ನಡೆದಿತ್ತು. ಪುತ್ರಿಯನ್ನು ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಈ ವೇಳೆ ಖಾದರ್ ಮಗಳು ಸಿಕ್ಕರೆ ಧಾರ್ಮಿಕ ಶಿಕ್ಷಣ ಕಲಿಸುವುದಾಗಿ ಹರಕೆ ಹೇಳಿಕೊಂಡಿದ್ದರು. ಮಾತ್ರವಲ್ಲ, ಹರಕೆಯ ಫಲವೆಂಬಂತೆ ಮಗಳು ಸಿಕ್ಕಿದ್ದಳು.
ಇದೇ ಕಾರಣಕ್ಕಾಗಿ ಖಾದರ್ ಪುತ್ರಿಯನ್ನು ಕೇರಳದ ಕಾಸರಗೋಡಿನಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಸೇರಿಸಿದ್ದರು. ಅಲ್ಲದೆ ಕುರಾನ್ ಕಂಠಪಾಠ ಮಾಡಿಸಿದ್ದರು. ಇದೀಗ ಈ ಬಾರಿ ದುಬೈನಲ್ಲಿ ನಡೆಯುವ ಕುರಾನ್ ಕಂಠಪಾಠ ಸ್ಪರ್ಧೆಗೆ ವಿಶ್ವದ 63 ಸ್ಪರ್ಧಾಳುಗಳ ಜೊತೆಗೆ ಭಾರತದಿಂದ ನಸೀಮಾ ಅವರನ್ನು ಏಕೈಕ ಪ್ರತಿನಿಧಿಯಾಗಿ ಯುಎಇ ಸರಕಾರ ಆಯ್ಕೆ ಮಾಡಿದೆ.