ಹೊಸದಿಲ್ಲಿ, ನ03(SS): ಉದ್ಯಮಿಗಳಿಗೆ ಕೇವಲ 59 ನಿಮಿಷಗಳಲ್ಲಿ ಒಂದು ಕೋಟಿ ರೂಪಾಯಿವರೆಗೆ ಸಾಲ ಮಂಜೂರು ಯೋಜನೆಯನ್ನು ಪ್ರಧಾನಿಯವರು ಪ್ರಕಟಿಸಿದ್ದು, ದೇಶದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ದೀಪಾವಳಿ ಪ್ರಯುಕ್ತ ಭರ್ಜರಿ ಉಡುಗೊರೆ ನೀಡಿದ್ದಾರೆ.
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತನಾಡಿದ ಅವರು, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕ್ಷೇತ್ರ ವಿಶಾಲವಾಗಿದೆ. ಈ ವಲಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ 12 ನೀತಿಗಳನ್ನು ಕೇಂದ್ರ ಸರಕಾರ ಅಂತಿಮಗೊಳಿಸಿದೆ. ಈ ಮಹತ್ವದ ಯೋಜನೆ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ ವರದಾನವಾಗಲಿದ್ದು, ಈ ವಲಯದ ಅಭಿವೃದ್ಧಿ ದೃಷ್ಟಿಯಿಂದ 12 ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ 6.3 ಕೋಟಿಗಿಂತ ಅಧಿಕ ಎಮ್.ಎಸ್.ಎಂ.ಇ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 11.1 ಕೋಟಿಗೂ ಅಧಿಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಈ ವಲಯ ದೇಶದ ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತಿದೆ. ಉತ್ಪಾದನಾ ವಲಯದಲ್ಲಿ ಶೇ.45ರಷ್ಟು ಪಾತ್ರವಹಿಸಿಸಿದ್ದು, ಶೇ.40ರಷ್ಟು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಈ ಪೈಕಿ ಕೇವಲ 59 ನಿಮಿಷಗಳಲ್ಲಿ ಸಾಲ ಸೌಲಭ್ಯ ದೊರೆಯಲಿರುವುದು ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ ಈ ವಲಯದಲ್ಲಿ ಜಿಎಸ್ಟಿ ನೋಂದಾಯಿತ ಕೈಗಾರಿಕೆಗಳಿಗೆ ಶೇ.2ರಷ್ಟು ರಿಯಾಯಿತಿ ನೀಡುವುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ.