ವರದಿ: ಸುಪ್ರೀತಾ ಸಾಲ್ಯಾನ್
ಮಂಗಳೂರು, ನ03(SS): ಬೀದಿ ನಾಯಿಯೊಂದು ಅಯ್ಯಪ್ಪ ಮಾಲಾಧಾರಿಗಳ ಜತೆ ಸೇರಿಕೊಂಡು, ವೃತ ನಡೆಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು, ತನ್ನ ಜಾಗಕ್ಕೆ ಸುರಕ್ಷಿತವಾಗಿ ಮರಳಿದೆ ಎಂದರೆ ನಿಮಗೆ ಆಶ್ವರ್ಯ ಆಗಿರಬೇಕಲ್ಲ... ಹೌದು ಆಶ್ಚರ್ಯವಾದರೂ ಇದು ಸತ್ಯ... ನಾಯಿಯೊಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಅಯ್ಯಪ್ಪ ಭಕ್ತರಂತೆ ವೃತವನ್ನು ಆಚರಿಸುತ್ತಿರುವ ಹೃದಯಸ್ಪರ್ಶಿ ಪ್ರಸಂಗ ಇದೀಗ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮೂಡುಬಿದಿರೆ ಸಮೀಪದ ತೋಡಾರು ಶಾಂತಿಗಿರಿ ಎಂಬಲ್ಲಿ "ಕಣ್ಣು ತೆರೆದೆಯಾ ಅಯ್ಯಪ್ಪ ಮಂದಿರ" ಎಂಬ ಕ್ಷೇತ್ರವೊಂದಿದ್ದು, ಅಲ್ಲಿ "ಸ್ವಾಮಿ" ಎಂಬ ಹೆಸರಿನ ನಾಯಿಯೊಂದಿದೆ. ಅಶೋಕ್ ಗುರುಸ್ವಾಮಿ ಎಂಬುವವರಿಗೆ ಸೇರಿದ ನಾಯಿ ಇದಾಗಿದ್ದು, 9 ವರುಷದ ಹಿಂದೆ ಕೇರಳದ ನಿಲೇಶ್ವರದಲ್ಲಿ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಈ ನಾಯಿ ಪಾದಯಾತ್ರೆಯಲ್ಲಿ ಜೊತೆಯಾಗಿತ್ತು. ಮಾತ್ರವಲ್ಲ, ಗುರುಸ್ವಾಮಿ ಅಶೋಕ್ ಸೇರಿದಂತೆ ಅನೇಕ ಅಯ್ಯಪ್ಪ ಭಕ್ತರ ಜೊತೆ ಈ ನಾಯಿ ಸುಮಾರು 480 ಕಿ.ಮೀ ಪಾದಯಾತ್ರೆ ಮಾಡಿತ್ತು.
ಇದೀಗ ಮಂಗಳೂರಿನ ಕುಲಶೇಖರ ಡೈರಿ ಅಯ್ಯಪ್ಪ ಭಕ್ತ ವೃಂದ ಮತ್ತು ಮೂಡುಬಿದಿರೆ ಅಯ್ಯಪ್ಪ ಭಕ್ತವೃಂದ ಸಮಿತಿಯು ಈ ಬಾರಿ ಜಂಟಿಯಾಗಿ ಶಬರಿಮಲೆಗೆ ಯಾತ್ರೆ ಕೈಗೊಳ್ಳಲಿದ್ದು, ಸ್ವಾಮಿ ಎಂಬ ಹೆಸರಿನ ನಾಯಿಯು ಪಾದಯಾತ್ರೆ ನಡೆಸಲಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ, ಅಯ್ಯಪ್ಪ ಭಕ್ತರಂತೆ ಈ ನಾಯಿಯು ಕೂಡ ಸಸ್ಯಹಾರಿಯಾಗಿದ್ದು, ಕೇವಲ ಮೊಸರು ಮತ್ತು ಅನ್ನ ಮಾತ್ರ ಸೇವಿಸುತ್ತಿದೆ.
ಕಳೆದ 9 ವರುಷಗಳ ಹಿಂದೆಯೂ ಈ ಶ್ವಾನ ಮಂಗಳೂರಿನಿಂದ ಶಬರಿಮಲೆಗೆ ಯಾತ್ರೆ ಹೊರಟ ಯಾತ್ರಾರ್ಥಿ ಜತೆಗೆ ನಿಲೇಶ್ವರದಲ್ಲಿ ಸೇರಿಕೊಂಡು ಸುಮಾರು 480 ಕಿ.ಮೀ ದೂರವನ್ನು ಕ್ರಮಿಸಿ ಯಾತ್ರಿಕರ ಜತೆ ಮಂಗಳೂರಿಗೆ ಮರಳಿತ್ತು. ಇದೀಗ ಈ ನಾಯಿ ಮತ್ತೆ ಸಸ್ಯಹಾರಿಯಾಗಿದ್ದು, ಶಬರಿಮಲೆಗೆ ಯಾತ್ರೆ ನಡೆಸಲು ವೃತ ಆಚರಿಸುತ್ತಿದೆ. ಮಂಗಳೂರಿನ ಕುಲಶೇಖರ ಡೈರಿ ಅಯ್ಯಪ್ಪ ಭಕ್ತ ವೃಂದ ಮತ್ತು ಮೂಡುಬಿದಿರೆ ಅಯ್ಯಪ್ಪ ಭಕ್ತವೃಂದ ಸಮಿತಿಯು ಶ್ರೀ ಕ್ಷೇತ್ರ ಕೊಲ್ಲೂರಿನಿಂದ ಈ ಬಾರಿ ಪಾದಯಾತ್ರೆ ನಡೆಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ಸುಮಾರು 75ಕ್ಕೂ ಮಿಕ್ಕಿ ಅಯ್ಯಪ್ಪ ಭಕ್ತರು ಭಾಗಿಯಾಗಲಿದ್ದಾರೆ.
ಇದೀಗ ಈ ಮೂಕಪ್ರಾಣಿಯ ಭಾವನಾತ್ಮಕ ನಂಟು ಎಲ್ಲರ ವಿಸ್ಮಯಕ್ಕೆ ಕಾರಣವಾಗಿದೆ.