ಮಂಗಳೂರು, ನ03(SS): ಲೈಸನ್ಸ್ ಪಡೆಯದ ಸಂಸ್ಥೆಯೊಂದಕ್ಕೆ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಿ ಸಿಐಟಿಯು ಮಂಗಳೂರು ನಗರ ಸಮಿತಿಯು ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದೆ.
ನಗರದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು. ಮಾತ್ರವಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಸಾಯಿ ಸೆಕ್ಯುರಿಟಿ ಸಂಸ್ಥೆಯ ಮೂಲಕ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಡಿ ಗ್ರೂಪ್ ಪೇಷೆಂಟ್ ಕ್ಯಾರ್ ನೌಕರರಿಗೆ ಈವರೆಗೆ ಯಾವುದೇ ಸವಲತ್ತುಗಳನ್ನು ನೀಡದೆ ಗುಲಾಮರಂತೆ ದುಡಿಸಿಕೊಳ್ಳುತ್ತಿದೆ. ಇದಕ್ಕೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಕುಮ್ಮಕ್ಕು ನೀಡುತ್ತಿದ್ದಾರೆ. ಅಲ್ಲದೆ ನೌಕರರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಆರೋಪಿಸಲಾಗಿದೆ.
ನೂರಾರು ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆಯು ಕಳೆದ 6-7 ವರ್ಷಗಳಿಂದ ಲೈಸನ್ಸ್ ಪಡೆಯದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಪಡೆದುಕೊಂಡಿರುವುದು ಹಲವಾರು ಸಂಶಯಕ್ಕೆ ದಾರಿ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮೇಲಾಧಿಕಾರಿಗಳಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ 8 ತಿಂಗಳ ಹಿಂದೆ ಲೈಸನ್ಸ್ ಪಡೆಯಲಾಗಿದೆ. ಜಿಲ್ಲಾ ಅಧೀಕ್ಷಕರು ಹಾಗೂ ಸಾಯಿ ಸೆಕ್ಯುರಿಟಿ ಸಂಸ್ಥೆಯ ಮಧ್ಯೆ ಭಾರೀ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರಗೆ ಹಾಕಬೇಕು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಜನರ ಆಶಾಕಿರಣವಾದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಲೆಬಾಳುವ ಔಷಧಿಗಳು ಹೊರಗಡೆ ರವಾನೆಯಾಗುತ್ತಿರುವುದು, ಅಲ್ಲಿನ ಆಹಾರ ಪದಾರ್ಥ ಸಾಮಗ್ರಿಗಳು ಮಾರಾಟವಾಗುತ್ತಿರುವುದು, ಶವಾಗಾರದಲ್ಲಿ ಅವ್ಯವಸ್ಥೆ, ಆರೋಗ್ಯ ಕಾರ್ಡ್ ಹೆಸರಿನಲ್ಲಿ ಗೋಲ್ಮಾಲ್ ಸೇರಿದಂತೆ ಹಲವು ಅವ್ಯವಸ್ಥೆಗಳು ವೆನ್ಲಾಕ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.