ಮಂಗಳೂರು, ನ03(SS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾಡುತ್ತಿರುವ ಮರಳಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡಲೇ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಪ್ರತಿಭಟನೆ ನಡೆಸಿದೆ.
ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ವತಿಯಿಂದ ಆಯೋಜಿಸಲಾದ ಪ್ರತಿಭಟನೆ ನೇತೃತ್ವವನ್ನು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ವಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾಡುತ್ತಿರುವ ಮರಳಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರವು ಮರಳುಗಾರಿಕೆಗೆ ಅನುಮತಿ ನೀಡದ ಕಾರಣ ಬಡ, ಮಧ್ಯಮ ವರ್ಗದ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಲಾರಿ ಚಾಲಕರು ಕೆಲಸವಿಲ್ಲದೆ ಕಂಗೆಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಮಾತ್ರವಲ್ಲ, ರಾಜ್ಯ ಸರಕಾರದ ಈ ನೀತಿಯ ವಿರುದ್ಧ ಬಿಜೆಪಿ ಭಜನೆ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದೆ. ಶಾಸಕ ವೇದವ್ಯಾಸ್ ಕಾಮತ್ ತಬಲ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಸುನೀಲ್ ಕುಮಾರ್ ಬಜಾಲ್, ಡಾಲ್ಫಿ ಡಿಸೋಜ, ಜಯಂತಿ ಬಿ.ಶೆಟ್ಟಿ, ಭಾರತಿ ಬೋಳಾರ, ಕೊರಗಪ್ಪ ಶೆಟ್ಟಿ, ರೋಹಿಣಿ ಬೋಳೂರು, ಕೃಷ್ಣಪ್ಪ ಗೌಡ ಮತ್ತಿತರರು ಪಾಲ್ಗೊಂಡಿದ್ದರು.