ನವದೆಹಲಿ, ನ03(SS): ಪ್ರಧಾನಿ ನರೇಂದ್ರ ಮೋದಿಯವರನ್ನು ಶಿವಲಿಂಗದ ಮೇಲಿನ ಚೇಳು ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ದೆಹಲಿಯ ಭಾರತೀಯ ಜನತಾ ಪಕ್ಷದ ನಾಯಕ ರಾಜೀವ್ ಬಬ್ಬರ್ ಮೊಕದ್ದಮೆ ದಾಖಲಿಸಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ತರೂರ್ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಾನನಷ್ಟಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ದೂರು ಸಲ್ಲಿಸಲಾಗಿದೆ.
ನಾನೊಬ್ಬ ಶಿವಭಕ್ತನಾಗಿದ್ದೇನೆ. ತರೂರ್ ಹೇಳಿಕೆಯಿಂದ ಕೋಟಿಗಟ್ಟಲೆ ಭಕ್ತರ ಭಾವನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಲ್ಲದೆ ಅವರ ಭಾವನೆಗೆ ಘಾಸಿಯುಂಟು ಮಾಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ಶಶಿ ತರೂರ್ ಆರ್.ಎಸ್.ಎಸ್.ಪಾಲಿಗೆ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳಿನಂತೆ ಅದನ್ನು ಬರಿಗೈನಲ್ಲಿ ಸರಿಸಲು ಸಾಧ್ಯವಿಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗುವುದಿಲ್ಲ ಎಂದು ವಿವಾದ ಸೃಷ್ಟಿಸುವ ಹೇಳಿಕೆ ನೀಡಿದ್ದರು.