ತಿರುವನಂತಪುರ, 04 (MSP): ಚಿತ್ತಿರಆಟ್ಟತ್ತಿರುನಾಳ್ ಪ್ರಯುಕ್ತ ನವೆಂಬರ್ 5ರಂದು ಶಬರಿಮಲೆ ಬಾಗಿಲು ತೆರೆಯಲಿದೆ. ಸೋಮವಾರ ಸಂಜೆ 5 ಗಂಟೆಗೆ ದೇಗುಲ ದ್ವಾರ ತೆರೆಯಲಿದ್ದು, ಮಂಗಳವಾರ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತದೆ. ಆದರೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಎರಡನೇ ಬಾರಿಗೆ ಶಬರಿಮಲೆ ದೇಗುಲ ಸೋಮವಾರ ತೆರೆಯಲಿದೆ. ಆದರೆ ಈ ಬಾರಿ ದೇಗುಲದ ಬಾಗಿಲು ಕೇವಲ 24 ಗಂಟೆಗಳವರೆಗೆ ತೆರೆಯಲಿದೆ. ಆದರೂ ಗಲಾಟೆ ಗದ್ದಲ ನಿರ್ಮಾಣ ವಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇದಕ್ಕಾಗಿ ಖಾಕಿಯ ಭದ್ರಕೋಟೆ ನಿರ್ಮಾಣ ಮಾಡಲಾಗಿದ್ದು, ದೇಗುಲ ಬಳಿ 1,500 ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ ದಕ್ಷಿಣ ವಲಯ ಎಡಿಜಿಪಿ ಅನಿಲ್ ಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಸನ್ನಿಧಾನದಲ್ಲಿ , ಪಂಪಾ ಮತ್ತು ನಿಲಯಕ್ಕಲ್ ನಲ್ಲಿ ಠಿಕಾಣಿ ಹೂಡಲಿದ್ದಾರೆ. ಶಬರಿಮಲೆಯಲ್ಲಿ ಶನಿವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿಯ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಪಿ.ಬಿ. ನೂಹ್ ಹೇಳಿದ್ದಾರೆ.