ಮಂಗಳೂರು,ನ 04 (MSP): ಮಂಗಳೂರಿನ ಲಿಟರರಿ ಫೌಂಡೇಶನ್ ಆಶ್ರಯದಲ್ಲಿ ನಗರದ ಡಾ| ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆಯೋಜಿಸಿರುವ 2 ದಿನಗಳ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಾಗಿ ಗಮನಿಸಿ ನೀಡಿರುವ , ಜೀವಮಾನ ಸಾಧನಾ ಪ್ರಶಸ್ತಿ ಸ್ವೀಕರಿಸಿರುವ ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ತಮಗೆ ಸನ್ಮಾನದ ವೇಳೆ ನೀಡಲಾದ ಚೆಕ್ ನ್ನು ಕಲ್ಲಡ್ಕದ ಶಾಲೆಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಲಿಟ್ ಫೆಸ್ಟ್ ನಲ್ಲಿ ಭಾಗವಹಿಸುವುದಕ್ಕೂ ಮುನ್ನ ಡಾ.ಎಸ್ಎಲ್ ಭೈರಪ್ಪ ಶುಕ್ರವಾರದಂದು ಕಲ್ಲಡ್ಕದ ಶಾಲೆಗೆ ಭೇಟಿ ನೀಡಿದ್ದರು. ಈ ಬಗ್ಗೆ ಮಾತನಾಡಿರುವ ಎಸ್ಎಲ್ ಭೈರಪ್ಪ, "ಕಲ್ಲಡ್ಕ ಶಾಲೆಯ ಲಿನನ್ ಶಿಕ್ಷಣ ಪದ್ಧತಿ ನೋಡಿ ನನಗೆ ಆಶ್ಚರ್ಯವಾಯಿತು. ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಕಲ್ಲಡ್ಕ ಶಾಲೆಯಲ್ಲಿ ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರ ಶಾಲೆಗೆ ನೀಡಲಾಗುತ್ತಿದ್ದ ಬಿಸಿಯೂಟವನ್ನು ನಿಲ್ಲಿಸಿ ದೊಡ್ಡ ತಪ್ಪು ಮಾಡಿದೆ. ಆ ತಪ್ಪು ಮಾಡಿದವರಿಗೆ ಜನರು ಯಾವ ರೀತಿ ಪಾಠ ಕಲಿಸಿದ್ದಾರೆ ಎಂಬುದೂ ಗೊತ್ತಿದೆ, ಶಾಲೆಯನ್ನು ನೋಡಿದ ಬಳಿಕ ದೇಣಿಗೆ ನೀಡಬೇಕು ಅಂದುಕೊಂಡೆ ಆದರೆ ಚೆಕ್ ಬುಕ್ ತಂದಿರಲಿಲ್ಲ ಆದ್ದರಿಂದ ಲಿಟ್ ಫೆಸ್ಟ್ ನಲ್ಲಿ ನೀಡಿರುವ ಚೆಕ್ ನ್ನು ಅದರ ಮೊತ್ತ ಎಷ್ಟು ಎಂಬುದನ್ನೂ ನೋಡದೇ ಇದ್ದ ಹಾಗೆಯೇ ಕಲ್ಲಡ್ಕದ ಶಾಲೆಗೆ ಹಸ್ತಾಂತರಿಸುತ್ತೇನೆ" ಎಂದು ಹೇಳಿದ್ದಾರೆ.