ಮಂಗಳೂರು,ನ 04 (MSP): ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೋಳಾರದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ವಲಯ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಇವರ ಆಶ್ರಯದಲ್ಲಿ ವೃಕ್ಷ ಸುರಕ್ಷಾ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ನ. 3ರ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಯುತ ಪ್ರಶಾಂತ ಕುಮಾರ್ ಸರ್ರವರು ಗಿಡ ಮರಗಳ ಮಹತ್ವದ ಕುರಿತು ತಿಳಿಸುತ್ತಾ ಪಡೆದ ಸಸ್ಯಗಳನ್ನು ಚೆನ್ನಾಗಿ ಬೆಳೆಸಿ, ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬಳಿಕ ಮಾತನಾಡಿದ ಕಾರ್ಪೋರೇಟರ್ ರತಿಕಲಾರವರು ನೆರಳು, ಗಾಳಿ, ಮಳೆಗಾಗಿ ಮರಗಳನ್ನು ಬೆಳೆಸಿ, ಗಿಡಗಳನ್ನು ನೆಟ್ಟು ಬೆಳೆಸಿ, ಪರಿಸರವನ್ನು ಉಳಿಸೋಣ ಎಂದು ತಿಳಿಸುತ್ತಾ ವಿದ್ಯಾರ್ಥಿಗಳೇ ನೀವು ಪಡೆದ ಗಿಡಗಳನ್ನು ಚೆನ್ನಾಗಿ ಬೆಳೆಸಿ ಬುದ್ದಿಮಾತು ಹೇಳಿದರು.
ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ರವರು ಮರಗಳು ನಮಗೆ ಗಾಳಿ, ಬೆಳಕು, ಮಳೆಯನ್ನು ಯಥೇಚ್ಛವಾಗಿ ಪಡೆಯಲು ಸಹಾಯ ಮಾಡುತ್ತವೆ. ಮರದ ಎಲೆಗಳು ಆಕ್ಷಿಜನ್ ತಯಾರು ಮಾಡುವ ವಿಧಾನಗಳನ್ನು ತಿಳಿಸಿದರು. ನಮ್ಮ ಸುತ್ತಮುತ್ತಲ ಚಿರಪರಿಚಿತ ಮರಗಳ ಕುರಿತು ತಿಳಿಸುತ್ತಾ ಅವುಗಳ ಮಹತ್ವ, ಅವುಗಳು ಬೆಳೆಯುವ ಜೀವಿತಾವಧಿಯ ಕುರಿತು ಸವಿವರವಾಗಿ ತಿಳಿಸಿದರು. ಮರದ ಬೇರುಗಳು ಭೂಮಿಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತವೆ. ಆದುದರಿಂದ ಪರಿಸರದಲ್ಲಿ ಜೀವ ವೈವಿಧ್ಯಗಳು ಉಳಿಯಬೇಕಾದರೆ ಗಿಡಗಳನ್ನು ನೆಟ್ಟು ಬೆಳೆಸೋಣ ಎಂದರು.
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೋಳಾರ ಇಲ್ಲಿಯ ಪ್ರಭಾರ ಮುಖ್ಯ ಶಿಕ್ಷಕಿ ವಿನಾಕ್ಷಿ ಕೆ. ಮಾತನಾಡಿ ಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ ಸರ್ವರಿಗೂ ಮನಪೂರ್ವಕ ವಂದನೆಗಳನ್ನು ತಿಳಿಸಿದರು. ಶಾಲೆಗೆ ನೀಡಿದ ಗಿಡಗಳನ್ನು ಅತ್ಯುತ್ತಮವಾಗಿ ಬೆಳೆಸುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಮಂಗಳೂರು ವಲಯದ ಕೋಶಾಧಿಕಾರಿಯವರಾದ ಶ್ರೀಯುತ ವಸಂತ ರಾವ್ರವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಗೆ ನೀಡಲಾದ ಗಿಡಗಳನ್ನು ಅತಿಥಿಗಳು ನೆಟ್ಟು ಅದನ್ನು ಚೆನ್ನಾಗಿ ಬೆಳೆಸಿ, ಪರಿಸರವನ್ನು ಚೆನ್ನಾಗಿರಿಸಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಶಿದ್ಲಿಂಗೌಡ ಹಿರೇಗೌಡ, ಪರಿಸರವಾದಿ ಶ್ರೀಯುತ ಮಾಧವ ಉಳ್ಳಾಲ, ಎಸ್.ಕೆ.ಪಿ.ಎ ಕಾರ್ಯದರ್ಶಿ ಅಜಯ್ ಕುಮಾರ್, ಅಧ್ಯಕ್ಷರಾದ ಪದ್ಮನಾಭ ಸುವರ್ಣ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಮಂಗಳೂರು ವಲಯದ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ವೃಕ್ಷ-ಸುರಕ್ಷಾ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಗ್ರೆಟ್ಟಾ ಅನಿತಾ ಫೆರ್ನಾಂಡಿಸ್ ನಿರ್ವಹಿಸಿದರು.