ಕಾಸರಗೋಡು, ನ 04 (MSP): ಆರು ವರ್ಷಗಳ ಹಿಂದೆ ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಕೊಲೆಗೀಡಾದ ಮೊಗ್ರಾಲ್ ಪುತ್ತೂರು ಬೆಳ್ಳೂರಿನ ಮುಹಮ್ಮದ್ ಕು೦ಞ (32) ಯ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲು ಕಾಸರಗೋಡು ಪೊಲೀಸರು ತೀರ್ಮಾನಿಸಿದ್ದಾರೆ.
ಕೊಲೆಗೀಡಾದ ಮುಹಮ್ಮದ್ ಕು೦ಞ
2012 ರ ಎಪ್ರಿಲ್ ಏಳರಂದು ಪಯಸ್ವಿನಿ ಹೊಳೆಯ ತೆಕ್ಕಿಲ್ ನಲ್ಲಿ ಜೀರ್ಣಾವಸ್ಥೆಯಲ್ಲಿ ಪತ್ತೆಯಾದ ಮೃತದೇಹ ಮುಹಮ್ಮದ್ ಕು೦ಞ ಯವರದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹಕ್ಕೆ ಯಾರೂ ವಾರೀಸುದಾರರು ಇಲ್ಲದಿದ್ದುದರಿಂದ ಕಣ್ಣೂರಿನ ಪಯಂಬಲದ ಸ್ಮಶಾನದಲ್ಲಿ ಮೃತದೇಹವನ್ನು ದಫನ ಮಾಡಲಾಗಿತ್ತು. ಆರೋಪಿಗಳಾದ ಮುಹಮ್ಮದ್ ಕು೦ಞ ಯ ಪತ್ನಿ ಸಕೀನಾ ಮತ್ತು ಈಕೆಯ ಪ್ರಿಯಕರ ಉಮ್ಮರ್ ನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಇವರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.
2012 ಮಾರ್ಚ್ ಐದರಿಂದ 30ರ ನಡುವೆ ಕೊಲೆ ನಡೆದಿತ್ತು. ಕೊಲೆ ಬಳಿಕ ಮೃತದೇಹವನ್ನು ಹೊಳೆಗೆ ಎಸೆದ ಸ್ಥಳದಿಂದ ಕೃತ್ಯಕ್ಕೆ ಬಳಸಿದ್ದ ಶಾಲು ಮತ್ತು ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವೈಜ್ಞಾನಿಕ ತನಿಖೆಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.