ಶಾರ್ಜಾ, ನ 05 (MSP): ಇತ್ತೀಚಿಗೆ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟ ಪ್ರಕಾಶ್ ರೈ, ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ನೋಡಲಿಚ್ಚಿಸದ ಅಯ್ಯಪ್ಪ ಭಗವಂತನೇ ಅಲ್ಲ ಎಂದು ಕಿಡಿಕಾರಿದ್ದಾರೆ.
ಗಲ್ಫ್ ನ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರೈ ಅವರು ಶಬರಿಮಲೆ ದೇಗುಲದ ಕುರಿತು ಪ್ರಸ್ತಾಪಿಸುತ್ತಾ, ಹೆಣ್ಣು ಅಂದ್ರೆ ತಾಯಿ,ಮಮತಾಮಯಿ, ಪ್ರೀತಿ, ಕರುಣೆಯ ದೇವತೆ,ಹೀಗಾಗಿಯೇ ಈ ಭೂಮಿ ತಾಯಿಯನ್ನು ಕೂಡಾ ಹೆಣ್ಣಿಗೆ ಹೋಲಿಸುತ್ತೇವೆ. ಆಕೆಯ ಸಾವಿರ ಪಾಲು ನೋವು ನುಂಗಿ ಮಗುವಿಗೆ ಜನ್ಮ ನೀಡುತ್ತಾಳೆ. ನಾವೆಲ್ಲಾ ಹೆಣ್ಣಿನಿಂದಲೇ ಜನ್ಮ ಪಡೆದಿದ್ದು. ಆದರೆ ಅದೇ ಹೆಣ್ಣನ್ನು ಪೂಜೆಯಿಂದ ಹೊರಗಿಡೋದು ಅಂದ್ರೆ ಏನರ್ಥ ? ಎಂದು ಪ್ರಶ್ನಿಸಿದರು. ಅಂತಹ ದೇವತೆಯ ಪ್ರಾರ್ಥನೆಗೆ ಅವಕಾಶ ಕೊಡದ ದೇವರು ದೇವರೇ ಅಲ್ಲ, ಜತೆಗೆ ಅವರನ್ನು ತಡೆಯುವ ಭಕ್ತರು ಭಕ್ತರೇ ಅಲ್ಲ. ಅದು ನನ್ನ ಪಾಲಿಗೆ ಧರ್ಮವೇ ಅಲ್ಲ ಅಂತಾ ಕಿಡಿಕಾರಿದರು.
ಮಹಿಳೆಯರಿಗೆ ಪೂಜೆ ಮಾಡಲು ಅವಕಾಶ ನೀಡದ ದೇವರು ಹಾಗೂ ಆತನ ಭಕ್ತರನ್ನು ನಾನು ನಂಬುವುದಿಲ್ಲ. ಎಲ್ಲರೂ ಜನಿಸುವುದು ಹೆಣ್ಣಿನಿಂದಲೇ ಎನ್ನುವುದು ನೆನೆಪಿಸಲೇಬೇಕು. ಹೀಗಾಗಿ ಮಹಿಳೆಗೆ ಪ್ರವೇಶಿಸುವ ಅವಕಾಶವನ್ನು ನಿರ್ಬಂಧಿಸಿದರೆ ಅದು ದೇವರು ಆಕೆಯ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಹೇಳಿದರು.
ನನಗೆ ಶಬರಿಮಲೆಗೆ ಹೋಗುವ ಇಚ್ಚೆ ಇಲ್ಲ. ಮಹಿಳೆಯರನ್ನು ಹತ್ತಿರ ಸೇರಿಸದ ಭಗವಂತನನ್ನು ನೋಡುವ ಇಚ್ಚೆಯೂ ನನಗಿಲ್ಲ. ಯಾವ ದೇವರು ಮಹಿಳೆಯನ್ನು ನೋಡೋದಿಲ್ಲವೋ ಆತ ದೇವರೇ ಅಲ್ಲ. ಮಹಿಳೆಯರಿಗೆ ಕೇರಳ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲೇಬೇಕು. ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಅಂತಾ ರೈ ಹೇಳಿದ್ದಾರೆ.