ಬೆಂಗಳೂರು,ನ 05 (MSP): ನ.10 ರಂದು ನಡೆಯಲಿರುವ ಟಿಪ್ಪುಜಯಂತಿ ಆಚರಣೆಯನ್ನು ಭದ್ರತೆಗಾಗಿ ವಿಧಾನಸೌಧದಿಂದ ಶಿಫ್ಟ್ ಮಾಡಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಈ ಹಿಂದೆ ನಿಗದಿಪಡಿಸಿದಂತೆ, ಟಿಪ್ಪುಜಯಂತಿ ಆಚರಣೆಯೂ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಬೇಕಾಗಿತ್ತು. ಆದರೆ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಬ್ಯಾಂಕ್ವೆಟ್ ಹಾಲ್ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಮದ್ಯಾಹ್ನದ ಒಳಗೆ ಜಯಂತಿಯನ್ನು ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಟಿಪ್ಪು ಜಯಂತಿ ಆಚರಣೆ ಬಗ್ಗೆ ಭದ್ರತೆಯ ವಿಚಾರವಾಗಿ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರಕಾರದ ವತಿಯಿಂದ ಆಚರಿಸುವ ಎಲ್ಲ ಜಯಂತಿಗಳೂ ರವೀಂದ್ರ ಕಲಾಕ್ಷೇತ್ರದಲ್ಲಿಯೇ ಮಾಡುವುದು ರೂಢಿ. ಹೀಗಾಗಿ ಈ ವರ್ಷದಿಂದ ಟಿಪ್ಪು ಜಯಂತಿ ಕೂಡ ರವೀಂದ್ರ ಕಲಾಕ್ಷೇತ್ರದಲ್ಲಿಯೇ ಅಚರಣೆ ಮಾಡಲು ತೀರ್ಮಾನಿಸಿಲಾಗಿದೆ ಎಂದರು.
ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಗದ್ದಲ ಗಲಾಟೆ, ಅಥವಾ ಸಮಾಜದ ಶಾಂತಿ ಭಂಗ ಮಾಡಲು ಪ್ರಯತ್ನ ಮಾಡಿದರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶಾಂತಿಭಂಗ ಮಾಡುವ ಹೇಳಿಕೆಗಳ ಬಗ್ಗೆಯೂ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಟಿಪ್ಪು ಜಯಂತಿ ಬಗ್ಗೆ ಪರ ಅಥವಾ ವಿರೋಧ ಮೆರವಣಿಗೆ ಹಾಗೂ ಬ್ಯಾನರ್ ಗಳಿಗೆ ಅವಕಾಶವಿಲ್ಲ. ಅಲ್ಲದೆ ಜಯಂತಿ ಆಚರಣೆ ಮಾಡುವ ಸ್ಥಳ ಹಾಗೂ ಸಭಾಂಗಣದಲ್ಲಿ ಮಾತ್ರ ಪೋಸ್ಟರ್ ಹಾಕಲು ಅವಕಾಶ ನೀಡಲಾಗಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಅವಹೇಳನಕಾರಿ, ಪ್ರಚೋದನಾಕಾರಿ ಪೋಸ್ಟ್ ಹಾಕಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಹೊರರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕೆಎಸ್ಆರ್ಪಿ ತುಕಡಿ ಕಳುಹಿಸಿಕೊಡಲಾಗಿದೆ. ಆದ್ದರಿಂದ ಟಿಪ್ಪು ಜಯಂತಿ ಭದ್ರತೆಗಾಗಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನ್ನು ಟಿಪ್ಪು ಜಯಂತಿಗೆ ನಿಯೋಜನೆ ಮಾಡಲಾಗಿದೆ ಎಂದರು.