ತಿರುವನಂತಪುರ,ನ 05 (MSP): ಚಿತ್ತಿರಆಟ್ಟತ್ತಿರುನಾಳ್ ಪ್ರಯುಕ್ತ ಶಬರಿಮಲೆ ಅಯ್ಯಪ್ಪ ಇನ್ನು ಕೆಲವೇ ಕ್ಷಣದಲ್ಲಿ ತೆರಯಲಿದ್ದು, ಯಾವುದೇ ಅಹಿತರಕರ ಘಟನೆ ನಡೆಯದಂತೆ ಇದಕ್ಕಾಗಿ ಖಾಕಿಯ ಭದ್ರಕೋಟೆ ನಿರ್ಮಾಣ ಮಾಡಲಾಗಿದ್ದು, ದೇಗುಲ ಬಳಿ 1,500 ಪೊಲೀಸರನ್ನು ನಿಯೋಜಿಸಲಾಗಿದೆ.
ಚಿತ್ತಿರಆಟ್ಟತ್ತಿರುನಾಳ್ ಅಂದರೆ ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಸಂಜೆ 5 ಕ್ಕೆ ತೆರೆಯಲಿದೆ.
ಆದರೆ ಈ ನಡುವೆ ಕೇರಳದ ದೇವಸ್ವಂ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸುರಕ್ಷತೆಯ ದೃಷ್ಟಿಯಲ್ಲಿ ಸಂಪೂರ್ಣ ಭದ್ರತೆ ನೀಡುವುದಾಗಿ ಹೇಳಿದ್ದಾರೆ. ಆದರೆ ನಿಷೇಧಿತ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡುವ ಸಲುವಾಗಿ ಯಾರೊಬ್ಬರು ಕೂಡಾ ವಿಶೇಷ ಭದ್ರತೆಗಾಗಿ ಮನವಿ ಸಲ್ಲಿಸಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇನ್ನು ದೇವಾಲಯದೊಂದಿಗೆ ಒಡನಾಟ ಹೊಂದಿರುವ ಪಂಡಲಂ ರಾಜ ಮನೆತನದವರು ಅಯ್ಯಪ್ಪ ದೇಗುಲದಲ್ಲಿ ಖಾಕಿಯಭದ್ರ ಕೋಟೆ ಒದಗಿಸಿರುವುದು ನೋವುಂಟುಮಾಡಿದೆ, ಪೊಲೀಸ್ ಭದ್ರತೆಯಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಬೇಕಾಗಿರುವುದು ಮನನೋಯಿಸಿದೆ ಎಂದು ರಾಜಕುಟುಂಬ ಹೇಳಿದೆ.