ಪುತ್ತೂರು, ನ06(SS): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾಳಿಗೆ ಪುತ್ತೂರಿನ 5ನೇ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.
ಕಳೆದ 2 ತಿಂಗಳಿಂದ ವಿವಾದಕ್ಕೆ ಕಾರಣವಾಗಿದ್ದ ಸುಬ್ರಹ್ಮಣ್ಯ ಮಠ ಮತ್ತು ದೇವಸ್ಥಾನದ ಸಂಘರ್ಷ ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಹಾಗೆಯೇ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಹುಡುಗರ ಮಧ್ಯೆ ಭಾರೀ ವಾಕ್ಸಮರ ನಡೆದಿತ್ತು.
ಆ ಕಡೆಯಿಂದ ಕುಂದಾಪುರಕ್ಕೆ ಬಂದರೆ ನೋಡಿಕೊಳ್ತೀನಿ ಅಂದಿದ್ರೆ, ಈ ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬಂದರೆ ನೋಡ್ತೀವಿ ಅಂತಾ ಸವಾಲು ಕೂಡ ಆಗಿತ್ತು. ಇತ್ತ ವಾಟ್ಸಪ್ ಸವಾಲು ಸ್ವೀಕರಿಸಿದ ಚೈತ್ರಾ ಕುಂದಾಪುರದ ತನ್ನ ಹುಡುಗರನ್ನು ಕಟ್ಟಿಕೊಂಡು ಸ್ವಾಮೀಜಿಯನ್ನು ಕಾಣುವ ನೆಪದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಳು. ಈ ವಿಚಾರ ತಿಳಿದು ಚೈತ್ರಾಳನ್ನು ಪ್ರಶ್ನೆ ಮಾಡಲು ಬಂದಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿತ್ತು.
ಬಳಿಕ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಅಂಗಳದಲ್ಲಿಯೇ ಬೀದಿ ಕಾಳಗ ನಡೆದಿತ್ತು. ಚೈತ್ರಾ ಮತ್ತು ಹುಡುಗರು ರಾಡ್ ಹಿಡಿದುಕೊಂಡು ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಲಾಠಿಚಾರ್ಜ್ ನಡೆಸಿ ಎರಡು ಗುಂಪನ್ನು ಚದುರಿಸಿದ್ದರು. ಸಂಜೆ ಹೊತ್ತಿಗೆ ಚೈತ್ರಾ ನಡೆಸಿದ ದರ್ಪ ಮತ್ತು ರಾಡಿನಲ್ಲಿ ಹಲ್ಲೆ ನಡೆಸಿದ್ದು, ಮೊಬೈಲಿನಲ್ಲಿ ಸೆರೆಯಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದರು.
ಇದೀಗ ಪುತ್ತೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಚೈತ್ರಾ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.