ಉಡುಪಿ, ನ06, (ss): ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ನಂಬಿಕೆಗೆ ಬೆಲೆ ಕೊಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತರ ಧರ್ಮಗಳ ವಿಚಾರವನ್ನು ಆಯಾ ಧರ್ಮಗಳು ನಿರ್ಧರಿಸುತ್ತದೆ. ಹಿಂದೂ ಧರ್ಮದ ವಿಚಾರದಲ್ಲಿ ನ್ಯಾಯಾಲಯ, ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಇದು ಸರಿಯಲ್ಲ. ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ನಂಬಿಕೆಗೆ ಬೆಲೆ ಕೊಡಬೇಕು ಎಂದು ಹೇಳಿದರು.
ಶಬರಿಮಲೆ ವಿಚಾರದಲ್ಲಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ. ಆ ನಂತರವೂ ಪಿಣರಾಯಿ ವಿಜಯನ್ ವರ್ತನೆ ಸರಿಯಾಗಿಲ್ಲ. ನಂಬಿಕೆಯ ಮೇಲೆ ಬಲಾತ್ಕಾರ, ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಟ ಪ್ರಕಾಶ್ ರೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೌರಿಯ ಮಾನಸಿಕತೆಯಿಂದ ಪ್ರಕಾಶ್ ರೈ ಇನ್ನು ಹೊರಬಂದಿಲ್ಲ. ಆ ಕಾರಣಕ್ಕೆ ಸ್ವಾಮಿ ಅಯ್ಯಪ್ಪ ದೇವರೇ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ನಮಗೆಲ್ಲಾ ನೋವು ತಂದಿದೆ ನಿಜ. ಯಾವ ಹಿಂಸೆಯನ್ನೂ ಸಹಿಸಲು ನಮಗೆ ಸಾಧ್ಯವಿಲ್ಲ. ಆದರೆ ಗೌರಿ ಅವರ ನಿಲುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಗೌರಿ ಲಂಕೇಶ್ ಹಿಂದೂ ಧರ್ಮ ಧರ್ಮವೇ ಅಲ್ಲ ಅಂದಿದ್ದರು. ಹಿಂದೂ ದೇವರುಗಳು ದೇವರೇ ಅಲ್ಲ ಅಂದಿದ್ದರು. ಗೌರಿಯ ಆ ಮಾನಸಿಕತೆಯಿಂದ ಪ್ರಕಾಶ್ ರೈ ಹೊರ ಬಂದಿಲ್ಲ ಎಂದು ವ್ಯಂಗ್ಯ ಮಾಡಿದರು.