ಕುಂದಾಪುರ, ನ 06(SM): ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹಾಸ್ಟೆಲ್ ವಾರ್ಡನ್ ಹಾಗೂ ಹಿರಿಯ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕುಂದಾಪುರದ ಕೋಟೇಶ್ವರ ಸಮೀಪದ ಕಾಲೇಜೊಂದರಲ್ಲಿ ನಡೆದಿದೆ.
ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯನ್ನು ಆಂದ್ರ ಪ್ರದೇಶ ಮೂಲದ ಮದ್ದಲಿ ಲೇಟಿ ಎಂಬುವರ ಪುತ್ರಿ ದ್ವಿತೀಯ ಬಿ.ಸಿ.ಎ. ಓದುತ್ತಿದ್ದ ವಿದ್ಯಾಥಿನಿ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಅದೇ ಹಾಸ್ಟೆಲ್ನ ವಾರ್ಡನ್ ಅನಿಷಾ ಹಾಗೂ ತೃತೀಯ ಬಿಸಿಎ ವಿದ್ಯಾರ್ಥಿನಿಗಳಾದ ಮಾಲು ಕರಿಷ್ಮಾ, ಆತೀಮೂಲೇ, ಆರ್ಯ ಹಾಗೂ ಸನು ಹಲ್ಲೆ ನಡೆಸಿದ್ದಾರೆ ಎಂದು ಗಾಯಗೊಂಡ ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿನಿಯರು ಹಾಗೂ ವಾರ್ಡನ್ ಪ್ರತಿ ದಿನ ಕಿರುಕುಳ ನೀಡುತ್ತಿದ್ದಾರೆ ಎಂದು ಕಿರಿಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅದನ್ನು ವಿರೋಧಿಸಿದ್ದ ಕಾರಣಕ್ಕಾಗಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಹಾಗೂ ಕಾಲೇಜಿನ ಚೇರ್ಮೆನ್ರಿಗೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಲಿಖಿತ ದೂರು ನೀಡಿದ್ದು, ಕಾಲೇಜು ಆಡಳಿತದಾರರಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಳು. ಅಲ್ಲದೆ, ವಸತಿ ನಿಲಯ ಬಿಡುವುದಾಗಿ ಆಕೆ ತಿಳಿಸಿದ್ದಳು. ಪೋಷಕರನ್ನು ಕರೆತಂದ ಮೇಲೆ ಆ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ತಿಳಿಸಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಿತರಾದ ವಾರ್ಡನ್ ಹಾಗೂ ತಂಡ ಸೋಮವಾರ ರಾತ್ರಿ ವಿದ್ಯಾರ್ಥಿನಿ ಮೇಲೆ ಹಾಸ್ಟೆಲ್ನಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.