ಸುಳ್ಯ, ನ07(SS): ಸುಬ್ರಹ್ಮಣ್ಯ ದೇವಾಲಯ ಹಾಗೂ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಮಧ್ಯದ ವಿವಾದ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ದೇವಾಲಯ ಹಾಗೂ ಮಠದ ನಡುವೆ ಸೃಷ್ಟಿಯಾಗಿರುವ ವಿವಾದ ಬಗೆಹರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಇದೀಗ ಈ ವಿಚಾರವಾಗಿ ಸುಳ್ಯ ನ್ಯಾಯಾಲಯ ಹೊರಡಿಸಿರುವ ನಿರ್ಬಂಧಕಾಜ್ಞೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಚಿತ್ರ, ಸೇವೆ, ದೇವರ ಫೋಟೋ ಹಾಗೂ ಕ್ಷೇತ್ರದ ಹೆಸರನ್ನು ಶ್ರೀ ಸಂಪುಟ ನರಸಿಂಹ ಮಠ ಬಳಸದಂತೆ ಸುಳ್ಯ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಾತ್ರವಲ್ಲ, ಸುಬ್ರಹ್ಮಣ್ಯ ದೇವಾಲಯದ ಸೇವಾ ಪಟ್ಟಿಯಲ್ಲಿರುವ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷಾ ಬಲಿ ಹಾಗೂ ಇನ್ನಿತರ ಯಾವುದೇ ಸೇವೆಗಳನ್ನು ಸ್ಥಳೀಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನಡೆಸದಂತೆ ತಿಳಿಸಿದೆ.
ದೇವರ ಫೋಟೋ, ಆಲ್ಬಂಗಳು, ರಥ ಉತ್ಸವಾದಿಗಳು, ರಥೋತ್ಸವಗಳು ಮತ್ತು ಕ್ಷೇತ್ರದ ಹೆಸರನ್ನು ಯಾವುದೇ ಮಾಧ್ಯಮಗಳಲ್ಲಿ, ರಶೀದಿಗಳಲ್ಲಿ, ಫಲಕ ಇತ್ಯಾದಿಗಳಲ್ಲಿ ಮಠಾಧಿಪತಿಗಳು ಮತ್ತು ಸಂಬಂಧಿಸಿದ ಟ್ರಸ್ಟ್ ಬಳಸದಂತೆ ಸುಳ್ಯ ಕೋರ್ಟ್ ನಿರ್ಬಂಧಕಾಜ್ಞೆ ಹೊರಡಿಸಿದೆ.
ಕಳೆದ ಹಲವಾರು ದಿನಗಳ ಬೆಳವಣಿಗೆಗಳು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಯ ಹೇಳಿಕೆ ಆರೋಪಗಳಿಂದ ಮನನೊಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಉಪವಾಸ ಕೂರುವ ನಿರ್ಧಾರ ಕೈಗೊಂಡಿದ್ದರು. ಇದೀಗ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ವಿವಾದ ಶಮನವಾಗುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ದಿನದಿಂದ ದಿನಕ್ಕೆ ಈ ವಿವಾದ ಜಟಿಲಗೊಳ್ಳುತ್ತಾ ಸಾಗುತ್ತಿದೆ.