ಮಂಗಳೂರು, ನ.7: ಭೂಕುಸಿತದಿಂದ ಬಂದ್ ಆಗಿದ್ದ ಹಾಸನ – ಮಂಗಳೂರು ನಡುವಿನ ಶಿರಾಡಿ ಘಾಟ್ ರಸ್ತೆಯ ದುರಸ್ತಿ ಕಾರ್ಯ ಬಹುತೇಕ ಮುಗಿದಿದ್ದು, ನ.12ರ ಬಳಿಕ ಘನ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾಡಿ ಘಾಟ್ನಲ್ಲಿ ಘನ ವಾಹನಗಳ ಸಂಚಾರಕ್ಕೆ ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಹಾಸನ ಜಿಲ್ಲೆಯಲ್ಲಿ ಸ್ವಲ್ಪ ಸಮಸ್ಯೆಯಿದೆ. ಇದೀಗ ಶಿರಾಡಿ ಘಾಟ್ ರಸ್ತೆಯ ದುರಸ್ತಿ ಕಾರ್ಯ ಬಹುತೇಕ ಮುಗಿದಿದ್ದು, ಶೀಘ್ರ ಲಘು ವಾಹನಗಳ ಜೊತೆಗ ಘನ ವಾಹನಗಳಿಗೂ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ದೀಪಾವಳಿಯ ಸಂದರ್ಭ ವಾಹನಗಳ ಸಂಚಾರ ಅಧಿಕವಿರುವುದರಿಂದ ಸದ್ಯ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡರಲಿಲ್ಲ. ದೀಪಾವಳಿ ಹಬ್ಬ ಕಳೆದ ಬಳಿಕ ಅಂದರೆ ನ.12ರ ನಂತರ ಘನ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುವುದು ಎಂದು ಸಸಿಕಾಂತ್ ಸೆಂಥಿಲ್ ಭರವಸೆ ನೀಡಿದ್ದಾರೆ.