ಮಂಗಳೂರು, ನ07(SS): ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡಿ ಎಂದು ಶಾಸಕ ಹರೀಶ್ ಪೂಂಜಾ ದ.ಕ ಜಿಲ್ಲಾಧಿಕಾರಿಗಳಿಗೆ ಪತ್ರ ಮೂಲಕ ಬರೆದು ವಿನಂತಿ ಮಾಡಿಕೊಂಡಿದ್ದಾರೆ.
ಈ ವಿಚಾರವಾಗಿ ಡಿಸಿಗೆ ಪತ್ರ ಬರೆದಿರುವ ಶಾಸಕ ಹರೀಶ್ ಪೂಂಜಾ, ಟಿಪ್ಪು ಹಿಂದೂಗಳು ಮತ್ತು ಕ್ರೈಸ್ತರನ್ನು ಕೊಲೆ ಮಾಡಿರುವ ವ್ಯಕ್ತಿ. ಹೈಕೋರ್ಟ್ ಕೂಡ ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೇಳಿದೆ. ಹೀಗಿರುವಾಗ ರಾಜ್ಯ ಸರ್ಕಾರ ಓಟ್ ಬ್ಯಾಂಕ್ ಮಾಡುವುದಕ್ಕೆ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಹೇಳಿದ್ದಾರೆ.
ಟಿಪ್ಪು ಜಯಂತಿಗೆ ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಬದಿಗೊತ್ತಿ ನನ್ನ ಹೆಸರು ಮತ್ತು ನನ್ನ ಬೆಳ್ತಂಗಡಿ ಶಾಸಕನಾದ ನನ್ನ ಹುದ್ದೆಯನ್ನು ಬಳಸಬಾರದು. ಮಾತ್ರವಲ್ಲ, ಕಾರ್ಯಕ್ರಮಕ್ಕೂ ತನ್ನನ್ನು ಆಹ್ವಾನಿಸಬೇಡಿ ಎಂದು ತಿಳಿಸಿದ್ದಾರೆ.
ನ10ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ನಡೆಸಲು ನಿರ್ಧರಿಸಲಾಗಿದೆ. ಸರ್ಕಾರಿ ಆದೇಶದಂತೆ ದ.ಕ ಜಿಲ್ಲೆಯಲ್ಲೂ ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಲಾಗಿದ್ದು, ಎಲ್ಲಾ ಶಾಸಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ನಿಯಮ. ಆದರೆ ಸರ್ಕಾರಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡಿ ಎಂದು ಶಾಸಕ ಹರೀಶ್ ಪೂಂಜಾ ವಿನಂತಿ ಮಾಡಿಕೊಂಡಿದ್ದಾರೆ.