ಮುಂಬೈ, ನ 08 (MSP): ಪ್ರಧಾನಿ ನರೇಂದ್ರ ಮೋದಿಗೆ ಭಗವಾನ್ ಶ್ರೀರಾಮ ಮರೆತೇ ಹೋಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ, ಯಾಕೆಂದರೆ ಮೋದಿ ಭಗವಾನ್ ಶ್ರೀರಾಮ ಜನಿಸಿದ ಪುಣ್ಯಭೂಮಿ ಅಯೋಧ್ಯೆಗೆ ಇಲ್ಲಿಯ ತನಕ ಒಂದು ಬಾರಿಯೂ ಏಕೆ ಭೇಟಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದೆ.
ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಲೇಖನದಲ್ಲಿ ಮೋದಿಯನ್ನು ಕೆಣಕಿದ್ದು, ಪ್ರಧಾನಿಯವರು ಇಲ್ಲಿಯವರೆಗೆ ಮೂರು ಬಾರಿ ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದಾರೆ. ಇದಲ್ಲದೆ ತಮ್ಮದೇ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಗೆ ಹಲವಾರು ಬಾರಿ ಭೇಟಿ ನೀಡಿದ್ದಾರೆ. ಆದರೆ ಶ್ರೀರಾಮ ಜನಿಸಿರುವ ಅಯೋಧ್ಯೆಗೆ ಮಾತ್ರ ಅವರು ಒಂದು ಬಾರಿಯೂ ಯಾಕೆ ಭೇಟಿ ಕೊಟ್ಟಿಲ್ಲ ಎಂದು ಖಾರವಾಗಿ ಪ್ರಶ್ನಿಸಿದೆ.
ವಿದೇಶಗಳಿಗೆ ಭೇಟಿ ಕೊಡುವ ಸಂದರ್ಭ ಪ್ರಧಾನಿ ಮೋದಿ ಅವರು ಅಲ್ಲಿನ ವಿವಿಧ ಮಸೀದಿಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನೂ ಶಿವ ಸೇನೆ ಉಲ್ಲೇಖಿಸಿದ್ದು ಆದರೆ ಈ ಪುಣ್ಯಭೂಮಿಯಾದ ಆಯೋಧ್ಯೆಗೆ ಮಾತ್ರ ಯಾಕೆ ಭೇಟಿ ಕೊಟ್ಟಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎಂದಿದೆ. ಅಲ್ಲದೆ ಅಯೋಧ್ಯೆಯ ಜನರಿಗೂ ಪ್ರಧಾನಿ ಮೋದಿ ಅಲ್ಲಿಗೆ ಯಾಕೆ ಭೇಟಿ ನೀಡಿಲ್ಲ ಎನ್ನುವುದು ಅನುಮಾನವಾಗಿ ಕಾಡುತ್ತಿರಬಹುದು ಎಂದು ಶಿವಸೇನೆ ತಿಳಿಸಿದೆ. ಅಲ್ಲದೆ ಪ್ರಧಾನಿ ಮೋದಿಗೆ ಅಯೋಧ್ಯೆ ಮತ್ತು ಭಗವಾನ್ ಶ್ರೀರಾಮ ಮರೆತು ಹೋಗಿರಬಹುದು ಎಂಬ ಸಂದೇಹವನ್ನು ಕಾಡುತ್ತಿದೆ ಎಂಬ ವ್ಯಂಗ್ಯವಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ್ದಾರೆ ಆದರೆ ಅಯೋಧ್ಯೆಯಲ್ಲಿ ಮಾತ್ರ ರಾಮ ಮಂದಿರ ನಿರ್ಮಿಸಲು ಮುಂದಾಗದಿರುವುದು ಯಾಕೆ ಎಂದು ಶಿವಸೇನೆ ಕೇಳಿದೆ.