ಭಟ್ಕಳ, ನ 08 (MSP): 2009ರ ಮೇ 5ರಂದು ಕುಂದಾಪುರ ಹೊಸಂಗಡಿ ಗ್ರಾಮದ ಕೆರೆಕಟ್ಟೆ ಎಂಬಲ್ಲಿ ನಡೆದ ಪೆಟ್ರೋಲ್, ಡಿಸೇಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದ ಮಾಜಿ ಶಾಸಕ ಮಂಕಾಳು ವೈದ್ಯ ಸೇರಿದಂತೆ ಎಲ್ಲ 9 ಆರೋಪಿಗಳನ್ನು ಆರೋಪ ಮುಕ್ತಗೊಳಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕಳೆದ 2009 ಮೇ 5ರಂದು ಬೆಳಗಿನ ಜಾವ 1.30ರ ಸಮಯ ಪ್ರಶಾಂತ ಭಂಡಾರಿ, ಮಂಜು ಯಾನೆ ಮಂಜುನಾಥ, ಪ್ರಕಾಶ್ ಪೂಜಾರಿ, ಸತೀಶ ಪೂಜಾರಿ, ಸತೀಶ ಶೆಟ್ಟಿ ಮತ್ತು ಶೇಖರ್ ಪೂಜಾರಿ ಎನ್ನುವವರು ಮಾರುತಿ ಜೆನ್ ಕಾರಿನಲ್ಲಿ ಬಂದು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಕೆರೆಕಟ್ಟೆ ಸಂತ ಅಂತೋನಿ ಚರ್ಚ್ ಎದುರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಡಿಸೇಲ್ ಮತ್ತು ಪೆಟ್ರೋಲ್ ತುಂಬಿದ ಕೆಎ 19ಎ 9481ನೇ ನಂಬರಿನ ಟ್ಯಾಂಕರ್ ಒಳಗೆ ಮಲಗಿದ್ದ ನೋಣಯ್ಯ ಗೌಡ ಮತ್ತು ಚಂದ್ರ ಆಚಾರಿ ಇವರ ಬಾಯಿಗೆ ಸದರಿ ವ್ಯಕ್ತಿಗಳು ಬಟ್ಟೆಯನ್ನು ಒತ್ತಿ ಹಿಡಿದು ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಕೈ ಕಾಲುಗಳನ್ನು ಕಟ್ಟಿ ಕೈಗಳಿಂದ ಹಲ್ಲೆ ನಡೆಸಿ ಹೊರಗೆ ಎಳೆದು ತಂದು ಅವರನ್ನು ತಮ್ಮ ಕಾರಿನಲ್ಲಿ ಬಲವಂತವಾಗಿ ತುಂಬಿಸಿ ಟ್ಯಾಂಕರ್ನ್ನು ದರೋಡೆ ಮಾಡಿಕೊಂಡು ಹೋಗಿದ್ದು, ಮೋಹನ ಪೂಜಾರಿ ಎನ್ನುವ ಇನ್ನೋರ್ವ ಆರೋಪಿ ಮಂಕಾಳು ವೈದ್ಯ ಮತ್ತು ರಾಮಾ ಮೊಗೇರ ನಡೆಸುತ್ತಿದ್ದ ಪೆಟ್ರೋಲ್ ಬಂಕ್ಗಳಿಗೆ ಪೆಟ್ರೋಲ್ ಡಿಸೇಲ್ನ್ನು ನೀಡಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 33 ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿತ್ತು. ಆದರೆ ಅಂದಿನ ಕುಂದಾಪುರದ ತಹಸೀಲ್ದಾರ ರಾಜು ಮೊಗವೀರರ ಸಮ್ಮುಖದಲ್ಲಿ ನಡೆದ ಪರೇಡ್ನಲ್ಲಿ ಆರೋಪಿಗಳನ್ನು ಗುರುತು ಹಚ್ಚುವ ಪ್ರಕ್ರಿಯೆ ವಿಫಲವಾಗಿದ್ದನ್ನು ನ್ಯಾಯಾಲಯ ಪರಿಗಣಿಸಿತ್ತು.
ಅಲ್ಲದೇ 2009, ಮೇ 4ರಂದು ದರೋಡೆಗೆ ಒಳಪಟ್ಟಿದೆ ಎನ್ನಲಾದ ಟ್ಯಾಂಕರ್ಗೆ ಭಾರತ ಪೆಟ್ರೋಲಿಯಂ ಕಂಪನಿಯವರು 4000 ಲೀ. ಪೆಟ್ರೋಲ್ ಹಾಗೂ 8000 ಲೀ. ಡಿಸೇಲ್ ನ್ನು ಬಟಾವಡೆ ಮಾಡಿದ್ದರು ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಎಂದು ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು. ಅಲ್ಲದೆ ಘಟನೆ ನಡೆದ ಸಮಯದಲ್ಲಿ ಪೆಟ್ರೋಲ್ ಪಂಪ್ ಮಂಕಾಳು ವೈದ್ಯರಿಗೆ ಸೇರಿದ್ದು ಎನ್ನುವಲ್ಲಿ ಸಾಬೀತುಪಡಿಸಿಲು ವಿಫಲವಾಗಿತ್ತು.
ಮಂಕಾಳು ನಿರಾಳ: ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಮಂಕಾಳು, ನನ್ನ ಮೇಲೆ ಆ ಪ್ರಕರಣವನ್ನು ಏಕೆ ಹೊರಿಸಲಾಯಿತು ಎನ್ನುವುದು ಭಟ್ಕಳದ ಎಲ್ಲ ಜನರಿಗೂ ಗೊತ್ತಿದೆ. ನಾನು ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.