ಉಡುಪಿ, ನ 09(SM): ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ದೀಪಾವಳಿ ಹಬ್ಬದ ಸಂಭ್ರಮ ನಡೆಯುತ್ತಿದ್ದು, ಈ ಸಂದರ್ಭ ಪಟಾಕಿ ಸಿಡಿಸುವ ವೇಳೆ ಮೂವರು ಬಾಲಕರು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ನವಂಬರ್ 7ರಂದು ಮಣಿಪಾಲದ ಅಲೆವೂರಿನ 11ರ ಬಾಲಕ ಹಾಗೂ ನವಂಬರ್ 6ರಂದು ಉಡುಪಿ ಕೊಳಂಬೆಯ 8 ವರ್ಷದ ಬಾಲಕ ಮತ್ತು ಉಚ್ಚಿಲ ಪಣಿಯೂರಿನ 25 ವರ್ಷದ ಯುವಕನ ಕೈಯಲ್ಲಿ ಪಟಾಕಿ ಸಿಡಿದು ಅದರ ಕಿಡಿ ಕಣ್ಣಿಗೆ ತಾಗಿ ಗಾಯ ಗೊಂಡಿದ್ದಾರೆ.
ಈ ಮೂವರಿಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ನವಂಬರ್ 7ರಂದು ಕುಂಜಿಬೆಟ್ಟುವಿನ 14 ವರ್ಷದ ಬಾಲಕ ಪಟಾಕಿ ಹಚ್ಚುತ್ತಿರುವಾಗ ಪಟಾಕಿ ಸಿಡಿದು ಆತನ ಮೈಮೇಲೆ ಗಾಯಗಳಾಗಿವೆ. ಕೂಡಲೇ ಆತನನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ತಿಳಿಸಿದ್ದಾರೆ.