ನವದೆಹಲಿ ನ 09 (MSP): ಕರಾವಳಿಯ ಹೆಚ್ಚಿನ ಮನೆಯಂಗಳದಲ್ಲಿ ಕಂಡುಬರುವ ಸದಾಪುಷ್ಪ ಗಿಡದಲ್ಲಿ ಕ್ಯಾನ್ಸರ್ ಹಾರಕ ಗುಣಗಳಿವೆ ಎಂಬ ಕುತೂಹಲಕಾರಿ ಅಂಶ ಬಯಲಾಗಿದೆ. ಸದಾಪುಷ್ಪ, ನಿತ್ಯಪುಷ್ಪ, ಬಟ್ಲಹೂ, ಗಣೇಶನ ಹೂ, ಸದಾಮಲ್ಲಿಗೆ,ನಿತ್ಯಕಲ್ಯಾಣಿ, ಹೀಗೆ ಹತ್ತು ಹಲವು ಹೆಸರಿನಿಂದ ಕರೆಯುವ ಬಹುವಾರ್ಷಿಕ ಸಸ್ಯ ಇದಾಗಿದೆ.
ಈ ಸದಾಪುಷ್ಪ ಗಿಡ ಮೂಲತಃ ನಮ್ಮ ದೇಶದಲ್ಲ. ಮೆಡಗಾಸ್ಕರ್ ಇದರ ತವರೂರು. ಉದ್ಯಾನವನಗಳಲ್ಲಿ ಅಲಂಕಾರ ಪುಷ್ಪವಾಗಿ ಬೆಳೆಸಲೆಂದು ತಂದ ಈ ಪುಟ್ಟಗಿಡ, ಸಮಯ ಕಳೆದಂತೆ ಇಡೀ ಬಾರತವನ್ನೇ ವ್ಯಾಪಿಸಿದೆ. ಇದರ ಎಲೆಗಳು ಹಸಿರಾಗಿದ್ದು ಎದುರು ಬದಿರಗಿರುತ್ತವೆ. ಇಡೀ ವರ್ಷವೂ ಹೂ ಬಿಡುವುದರಿಂದ ಇದನ್ನು ನಿತ್ಯಪುಷ್ಪ ಎಂದು ಕರೆಯಲಾಗಿದೆ.
ಕ್ಯಾನ್ಸರ್ ಜೀವಾಣು ಪತ್ತೆ ಹಾಗೂ ನಾಶ ಮಾಡುವ ಕಾರ್ಯವನ್ನು ಏಕಕಾಲಕ್ಕೆ ಮಾಡಬಲ್ಲ ಚಿಕಿತ್ಸಾ ವಿಧಾನವನ್ನು ರೂರ್ಕಿ ಐಐಟಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಸದಾಪುಷ್ಪ ಗಿಡದ ಕಾರ್ಬನ್ ಬಳಕೆಯಾಗುತ್ತದೆ. ಇದಕ್ಕೆ ಕಾರ್ಬನ್ ನ್ಯಾನೋಡಾಟ್ಸ್ ವಿಧಾನ ಎಂದು ಹೆಸರಿಡಲಾಗಿದೆ. ರೋಸಿ ಪೆರಿವಿಂಕಲ್ ಅಥವಾ ಸದಾಪುಷ್ಪದ ಗಿಡದ ಎಲೆಗಳ ಇಂಗಾಲದಿಂದ ಈ ತಂತ್ರಜ್ಞಾನ ಅಭಿವೃದ್ಧಿಗೊಂಡಿರುವುದು ವಿಶೇಷ. ಈ ಅಣುಗಳನ್ನು ನ್ಯಾನೋ ರೂಪಕ್ಕೆ ಇಳಿಸಿದಾಗ ಅವು ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆಯ ಗುಣ ಪಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನ ಮತ್ತು ಸಂಶೋಧನ ಮಂಡಳಿ (ಎಸ್ಇಆರ್ಬಿ) ಹಾಗೂ ಬಯೋ ಟೆಕ್ನಾಲಜಿ (ಡಿಬಿಟಿ), ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳ ನೆರವಿನಿಂದ ಕೈಗೊಳ್ಳಲಾಗಿದ್ದ ಸಂಶೋಧನೆಯಿಂದ ಸದ್ಯಕ್ಕೆ ಈ ಹೊಸ ಇಂಗಾಲದ ಅಣು ಪತ್ತೆ ಆಗಿದೆಯಷ್ಟೆ. ಈ ಹೊಸ ವಿಧಾನ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂದು ವಿಜ್ಞಾನಿಗಳು ಆಶಿಸಿದ್ದಾರೆ.
ಸದಾಪುಷ್ಪದ ವೈಜ್ಞಾನಿಕ ಹೆಸರು ಕ್ಯಾಥೆರ್ಯಂತಸ್ ರೋಸಿಯಸ್. ಇದು ಎಪೋಸೈನೇಸಿ ಎಂಬ ಕುಲಕ್ಕೆ ಸೇರಿದ ಸಸ್ಯವಾಗಿದೆ. ಸದಾಪುಷ್ಪದ ಕಾಂಡವು ಮೆದುವಾಗಿದ್ದು ಈ ಗಿಡ ಒಂದು ಮೀಟರ್ ನಷ್ಟು ಉದ್ದ ಬೆಳೆಯುತ್ತದೆ. ಈ ಸಸ್ಯದ ಹೂವುಗಳು ಐದು ದಳಗಳನ್ನು ಹೊಂದಿರುತ್ತದೆ. ನಿತ್ಯಹರಿದ್ವರ್ಣ ಹಾಗೂ ಔಷಧೀಯ ಸಸ್ಯವೆಂದು ಪರಿಗಣಿಸಲ್ಪಟ್ಟಿದ್ದು, ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಮಲೇಷ್ಯಾ, ಪಾಕಿಸ್ಥಾನ, ಬಾಂಗ್ಲಾದೇಶಗಳಲ್ಲೂ ಕಂಡು ಬರುತ್ತದೆ. ಆಸ್ಟ್ರೇಲಿಯಾ ಹಾಗೂ ಕ್ವೀನ್ಸ್ಲ್ಯಾಂಡ್ಗಳಲ್ಲಿ ಇದರ ಕೃಷಿಯ ಮೂಲಕ ಇವನ್ನು ಅಗಾಧವಾಗಿ ಬೆಳೆಯಲಾಗುತ್ತದೆ.