ಮಂಗಳೂರು, ನ 09(SM): ಕರ್ನಾಟಕ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವಾಗಿ ನವಂಬರ್ 10ರಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಹಾಗೂ ಯಾವುದೇ ಸಮಸ್ಯೆಯಾಗದಂತೆ ಆಚರಿಸಲು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಮಾಡಿದ್ದಾರೆ.
ನವಂಬರ್ 9ರ ಸಂಜೆ 6 ಗಂಟೆಯಿಂದ ನವಂಬರ್ 11ರ ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ರಾಜಕೀಯ ಕರ್ಯಕ್ರಮಗಳಾದ ಬಹಿರಂಗ ಸಭೆ ಸಮಾರಂಭ, ಜಾಥಾ ಮತ್ತು ಮೆರವಣಿಗೆಗಳನ್ನು ನಿರ್ಬಂಧಿಸಲಾಗಿದೆ.
ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯನ್ನು ಆಧರಿಸಿ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ. ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿ, ಸಂಘಟನೆಯ ಸದಸ್ಯರು ಯಾವುದೇ ರೀತಿಯ ಪ್ರತಿಭಟನೆ ಮೆರವಣಿಗೆ, ಬ್ಯಾನರ್, ಬಂಟಿಂಗ್ಸ್, ಬಾವುಟ, ಧ್ವನಿವರ್ಧಕ ಅಳವಡಿಸಿ ಘೋಷಣೆಗಳನ್ನು ಕೂಗದಂತೆ ಹಾಗೂ ಗುಂಪು ಗುಂಪಾಗಿ ಸೇರಿ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ನೀಡಿದ್ದಾರೆ.