ಉಡುಪಿ, ನ 09(SM): ಇಂಗ್ಲೇಂಡ್ ನಲ್ಲಿ ಮಗುವನ್ನು ದತ್ತು ನೀಡಲಾಗುವುದೆಂದು ವೆಬ್ ಸೈಟ್ ನಲ್ಲಿ ಹಾಕಿದ್ದ ಜಾಹಿರಾತನ್ನು ನಂಬಿ 9 ಲಕ್ಷ ರೂಪಾಯಿ ಪಾವತಿಸಿ ಮಹಿಳೆಯೊಬ್ಬರು ಮೋಸ ಹೋಗಿರುವ ಘಟನೆ ಉಡುಪಿಯ ಕಾಪು ತಾಲೂಕಿನ ಉಚ್ಚಿಲದಲ್ಲಿ ನಡೆದಿದೆ. ಮೂಳೂರಿನ ಹಸೀನಾ ಮೋಸಕ್ಕೊಳಗಾದ ಮಹಿಳೆ.
ಅಕ್ಟೋಬರ್ 20ರಂದು ಹಸೀನಾ ಮೊಬೈಲ್ ವೆಬ್ ಸೈಟಿನಲ್ಲಿ ಸರ್ಚ್ ಮಾಡುತ್ತಿರುವಾಗ ಇಂಗ್ಲೆಂಡ್ನಿಂದ ಒಂದು ಹೆಣ್ಣು ಮಗುವನ್ನು ಅಲ್ಲಿನ ಕಾನೂನಿನ ಪ್ರಕಾರ ದತ್ತುಕೊಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಅದನ್ನು ನಂಬಿದ ಹಸೀನಾ, ಅದಕ್ಕೆ ಸಂಬಂದಿಸಿ ತನ್ನ ವಿಳಾಸ, ದೂರವಾಣಿ ವಿವರಗಳನ್ನು ಸಲ್ಲಿಸಿದ್ದಾರೆ.
ಐದು ದಿನಗಳ ಬಳಿಕ ಹಸೀನಾರ ಮೊಬೈಲ್ ಗೆ 8929595545 ಸಂಖ್ಯೆಯಿಂದ ಕರೆ ಬಂದಿದೆ. ಮಗುವಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಇಂಗ್ಲೆಂಡ್ನಿಂದ ಪಾರ್ಸೆಲ್ ಕಳುಹಿಸುವುದಾಗಿ ಕರೆ ಮಾಡಿದ ಆಸಾಮಿ ತಿಳಿಸಿದ್ದ. ಅದನ್ನು ಡೆಲಿವರಿ ನೀಡಬೇಕಾದರೆ 40,000/-ರೂಪಾಯಿಗಳನ್ನು ಪಾವತಿ ಮಾಡಬೇಕು ಎಂಬುದಾಗಿ ತಿಳಿಸಿದ್ದ. ಅದರಂತೆ ಹಸೀನಾ 40 ಸಾವಿರ ರೂಪಾಯಿಗಳನ್ನು ತನ್ನ ಖಾತೆಯಿಂದ ಕೃಷ್ಣ ಕುಮಾರ್ ಎಂಬಾತನ ಇಂಡಿಯನ್ ಬ್ಯಾಂಕ್ (625999036) ಖಾತೆಗೆ ವರ್ಗಾಯಿಸಿದ್ದಾರೆ.
ಆ ಬಳಿಕ ಆರೋಪಿಗಳಾದ ಗಗನ್ ಗರ್ಗ್, ರಮಣ ಪ್ರೀತ್ ಕೌರ್, ಜಸ್ ಮೀನ್ ಸುಲ್ತಾನ್, ದೊಕೆನೋ ಪಾವ್, ಜಹರುಲ್ ಹಕ್ ಮತ್ತು ಏರೋನ್ ಗಜ್ ಲಿಂಗ್ ಎಂಬವರು ಹಸೀನಾರಿಗೆ ಕರೆ ಮಾಡಿ ಇಂಗ್ಲೆಂಡ್ ನಿಂದ ಕಳುಹಿಸಿರುವ ಪಾರ್ಸೆಲ್ನಲ್ಲಿ ಇಂಗ್ಲೆಂಡಿನ ಪೌಂಡ್ಸ್ ಗಳಿವೆ. ಅವುಗಳನ್ನು ಬಿಡಿಸಿಕೊಳ್ಳಲು ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ಫಿರ್ಯಾದಿದಾರರ ಮೇಲೆ ಕೇಸು ದಾಖಲಿಸುವುದಾಗಿ ಹೆದರಿಸಿದ್ದರು. ಅದರಂತೆ ಮತ್ತೆ ಹಸೀನಾ ಹಣ ಪಾವತಿಸಿದ್ದಾರೆ.
ಅಂತಿಮವಾಗಿ ಆರೋಪಿಗಳು ದತ್ತು ಮಗುವನ್ನು ಕೊಡದೆ ಮತ್ತು ಪಾರ್ಸೆಲ್ನ್ನು ಕಳುಹಿಸದೆ ಹಸೀನಾರಿಂದ ಸುಮಾರು 9,00,000 ರೂಪಾಯಿಗಳನ್ನು ತಮ್ಮ ಖಾತೆಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದು ತಿಳಿದ ಹಸೀನಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಉಡುಪಿ ಅಪರಾಧ ಪತ್ತೆ ದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಮುಂದುವರೆಸಿದ್ದಾರೆ.