ಮಂಗಳೂರು, ನ10(SS): ವಿಜಯಾ ಬ್ಯಾಂಕ್ ವಿಲೀನ ತಪ್ಪಿಸಲು ಕೇಂದ್ರಕ್ಕೆ ಒತ್ತಡ ತರಲು ಸಾಧ್ಯವಾಗದೇ ಇದ್ದರೆ, ನಳಿನ್ ಕುಮಾರ್ ಕಟೀಲ್ ಬದುಕಿದ್ದರೂ ಸತ್ತಹಾಗೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಲಾಭದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ಕೇಂದ್ರ ಸರಕಾರ ವಿಲೀನಗೊಳಿಸಿದೆ. ವಿಜಯಾ ಬ್ಯಾಂಕ್ ಈ ಮಟ್ಟಕ್ಕೆ ಬರಲು ನಮ್ಮ ಸಮುದಾಯದವರು ಬೆವರು ಸುರಿಸಿದ್ದಾರೆ. ಇದರ ಬಗ್ಗೆ ಮಾನ್ಯ ಸಂಸದ ಕಟೀಲ್ ಅವರಿಗೆ ತಿಳುವಳಿಕೆ ಇಲ್ಲ. ವಿಜಯಾ ಬ್ಯಾಂಕ್ ವಿಲೀನ ತಪ್ಪಿಸಲು ಕೇಂದ್ರಕ್ಕೆ ಒತ್ತಡ ತರಲು ಸಾಧ್ಯವಾಗದೇ ಇದ್ದರೆ, ನಳಿನ್ ಕುಮಾರ್ ಕಟೀಲ್ ಬದುಕಿದ್ದರೂ ಸತ್ತಹಾಗೆ ಎಂದು ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದ ಹೆಮ್ಮೆಯ ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ಕೂಡಾ ಒಂದು. ಲಾಭದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಬ್ಯಾಂಕ್ ಜೊತೆ ವಿಲೀನಗೊಳಿಸಲಾಗಿದೆ. ವಿಲೀನ ಪ್ರಕ್ರಿಯೆ ತಪ್ಪಿಸುವ ಕನಿಷ್ಟ ಪ್ರಯತ್ನವನ್ನು ಎಲ್ಲದಕ್ಕೂ ಬಾಯಿ ಬಡಿದುಕೊಳ್ಳುವ ಬಿಜೆಪಿ ನಾಯಕರು ಮಾಡಿಲ್ಲ ಎಂದು ಹೇಳಿದರು.
ನಳಿನ್ ಕಟೀಲ್ ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ವಿಲೀನ ಪ್ರಕ್ರಿಯೆಯನ್ನು ನಿಲ್ಲಿಸಲಿ. ಇಲ್ಲದಿದ್ದರೆ, ನಳಿನ್ ಕುಮಾರ್ ಕಟೀಲ್ ಸತ್ತಿದ್ದಾರೆಯೇ ಎಂದು ಪ್ರಶ್ನಿಸಬೇಕಾಗುತ್ತದೆ. ಇನ್ನು ಕೇವಲ ಅವರ ಶವಸಂಸ್ಕಾರ ನಡೆಸುವುದು ಮಾತ್ರ ಬಾಕಿಯಿದೆ ಎಂದು ಹೇಳಬೇಕಾಗುತ್ತದೆ ಎಂದು ರಮಾನಾಥ ರೈ ಕಿಡಿಕಾರಿದ್ದಾರೆ.