ಬೆಂಗಳೂರು, ನ10(SS): ರಾಜ್ಯದ ಎಲ್ಲೆಡೆ ಟಿಪ್ಪು ಜಯಂತಿ ಆಚರಣೆಗೆ ಪರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ಗಳ ಮೂಲಕ ಮತ್ತೆ ಸಮರ್ಥಿಸಿಕೊಂಡಿದ್ದಾರೆ.
ಮೈಸೂರು ಹುಲಿ ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ದೇಶ ಪ್ರೇಮಿ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಟಿಪ್ಪು ಜಯಂತಿ ಆಚರಣೆಯಲ್ಲಿ ಯಾವುದೇ ತಪ್ಪಿಲ್ಲ. ಟಿಪ್ಪುವಿನ ಜನ್ಮದಿನದಂದು ದೇಶಪ್ರೇಮ, ತ್ಯಾಗ ಮತ್ತು ಜನಪರ ಆಡಳಿತವನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಜನತೆಗೆ ತಿಳಿಸಿದ್ದಾರೆ.
ಬಿಜೆಪಿ ಪಕ್ಷದವರು ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಟಿಪ್ಪುವನ್ನು ಹಾಡಿ ಹೊಗಳಿದ್ದರು. ಟಿಪ್ಪುವಿನ ಬಗ್ಗೆ ಪುಸ್ತಕವನ್ನು ಕೂಡ ಬರೆಸಿದ್ದಾರೆ. ಆದರೆ ಈಗ ಅವರೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸುತ್ತಿದ್ದಾರೆ. ಇದು ಸ್ವಾರ್ಥರಾಜಕಾರಣ ಎಂದು ಟೀಕಿಸಿದ್ದಾರೆ.
ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಜಯಂತಿ ಆಚರಣೆ ಪಟ್ಟಿಗೆ ಮಹಾಪುರುಷ - ಮಹಿಳೆಯರ ಜಯಂತಿ ಆಚರಣೆಯನ್ನು ಸೇರಿಸುತ್ತಾ ಬಂದಿದೆ. ಈ ಸಂಪ್ರದಾಯವನ್ನು ಹಿಂದಿನ ನಮ್ಮ ಸರ್ಕಾರ ಹುಟ್ಟುಹಾಕಿದ್ದಲ್ಲ, ಆದರೆ ಈಗ ಟಿಪ್ಪು ಆಚರಣೆಗೆ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು.