ಬೆಂಗಳೂರು, ನ 10: 104 ಸೀಟು ಬಂದರೂ ಬಿಜೆಪಿಗೆ ಅಧಿಕಾರ ತಪ್ಪಿದೆ. ಅಧಿಕಾರ ಬಿಜೆಪಿಯ ಕೈ ತಪ್ಪಲು ಟಿಪ್ಪು ಸುಲ್ತಾನ್ ಶಾಪವೇ ಕಾರಣ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಪ್ರತಿಭಟನೆ ನಡೆಸಲು ಒಂದು ಕಾರಣ ಬೇಕಿದೆ. ಅದಕ್ಕಾಗಿ ಅವರು ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ. 104 ಸೀಟು ಬಂದರೂ ಬಿಜೆಪಿಗೆ ಅಧಿಕಾರ ತಪ್ಪಲು ಟಿಪ್ಪು ಸುಲ್ತಾನ್ ಶಾಪವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಆಚರಿಸುತ್ತಿರುವುದರಿಂದ ಕಾಂಗ್ರೆಸ್ ಮತ್ತೆ ಸಮ್ಮಿಶ್ರ ಸರಕಾರದಲ್ಲಿ ಅಧಿಕಾರದಲ್ಲಿದೆ. ನಾವು ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸುತ್ತಿಲ್ಲ. ಇದಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.
ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿ ಜಾಣ ನಡೆಯಿಟ್ಟಿರುವ ಸಿಎಂ ಕುಮಾರಸ್ವಾಮಿ, ವಿಶ್ರಾಂತಿಯ ಹೆಸರಿನಲ್ಲಿ ಕಾರ್ಯಕ್ರಮದಿಂದ ದೂರವುಳಿದಿದ್ದಾರೆ. ಒಂದು ರೀತಿಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್ ಕಾರ್ಯಕ್ರಮದಂತಾಗಿದೆ. ನಾನು ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸಲಹೆಯನ್ನೂ ನೀಡಲಿಲ್ಲ ಇದೆಲ್ಲಾ ಸುಳ್ಳು ಸುದ್ದಿ ಎಂದು ರೇವಣ್ಣ ಹೇಳಿದ್ದಾರೆ.