ಉಡುಪಿ, ನ 10(SM): ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥ ಸ್ವಾಮೀಜಿಯವರು ಶನಿವಾರ ತಮ್ಮ ಶಿಷ್ಯರಾದ ಶ್ರೀ ಈಶಪ್ರಿಯ ತೀರ್ಥರನ್ನು ಅದಮಾರು ಮಠದ ಉತ್ತರಾಧಿಕಾರಿ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಒಂದು ಯೋಗ್ಯ ಶಿಷ್ಯ ಬೇಕೆಂದು ಅನಂತಾಸನ ದೇವರಲ್ಲಿ ಬೇಡಿಕೊಂಡಿದ್ದೆ. ಅದನ್ನು ದೇವರು ಕರುಣಿಸಿದ್ದಾನೆ. ಈಗ ನನಗೆ ೬೦ ವರ್ಷ ಪ್ರಾಯ. ಹಾಗಾಗಿ ಮಠದ ಕಾರ್ಯಭಾರವನ್ನು ಅವರಿಗೆ ನೀಡುತ್ತಿದ್ದೇನೆ. ವೈದಿಕತನವಿದ್ದರೆ ಮಾತ್ರ ಸಾಲದು ಅದನ್ನು ಲೌಕಿಕ ಜನರಿಗೆ ತಿಳಿಸಿಕೊಡಬೇಕು. ಈಗ ಈಶಪ್ರಿಯರಿಗೆ ಲೌಕಿಕ ಹಾಗೂ ವೈದಿಕದ ಎರಡರ ಜ್ಞಾನವಿದೆ. ನಮ್ಮ ಶಿಷ್ಯರ ಬಗ್ಗೆ ಹೆಮ್ಮೆ ಇದೆ. ನಾನು ಕೂಡ ಮಾರ್ಗದರ್ಶಿಯಾಗಿರುತ್ತೇನೆ ಎಂದಿದ್ದಾರೆ.
ಹಣಕಾಸು ನಿರ್ವಹಣೆ, ಪೂಜೆ, ಗುರುಮಠದ ಭೇಟಿ, ಫಲ ಮಂತ್ರಾಕ್ಷತೆ ಕೊಡುವುದು ಪೀಠಾಧಿಪತಿಯ ಜವಾಬ್ದಾರಿ. ಈಶಪ್ರಿಯರು ಅದಮಾರು ಪಾರಂಪರ್ಯದ ೩೩ನೇ ಯತಿ. ಹಿರಿಯ ಯತಿಗಳು ಬದುಕಿದ್ದಾಗಲೇ ಅಧಿಕಾರವನ್ನು ತಮ್ಮ ಕಿರಿಯರಿಗೆ ಕೊಡಬೇಕು. ಇದು ಮನೆ-ಮನೆಗೆ ನೀಡುವ ಸಂದೇಶವಾಗಬೇಕು ಎಂದರು.
ಜೂನ್ 19, 2014 ರಲ್ಲಿ ದುರ್ಗ ಬೆಟ್ಟದಲ್ಲಿ ಈಶ ಪ್ರಿಯ ತೀರ್ಥರನ್ನು ಶಿಷ್ಯನನ್ನಾಗಿ ಸ್ವೀಕಾರ ಮಾಡಿಕೊಂಡಿದ್ದೇನೆ. ವಿಶ್ವಪ್ರಿಯರು 1972 ರಲ್ಲಿ ಶಿಷ್ಯ ಸ್ವೀಕಾರ ಪಡೆದುಕೊಂಡರು. ಒಬ್ಬ ಶಿಷ್ಯ ಸ್ವೀಕರಿಸಿದಾಗಲೇ ಆತ ಉತ್ತರಾಧಿಕಾರಿಯಾಗುತ್ತಾನೆ. ಸ್ವಲ್ಪ ಪ್ರಬುದ್ದತೆ ಪಡೆದಾಗ ಆತ ಜವಾಬ್ದಾರಿಯನ್ನು ಹೊರಲು ಯೋಗ್ಯವಾಗುತ್ತಾನೆ ಎಂದರು. ಬರೀ ಪ್ರತಿಮೆಯನ್ನು ಪೂಜಿಸುವುದು ಮಾತ್ರ ಕಾವಿ ತೊಟ್ಟವರ ಕೆಲಸವಲ್ಲ. ಜನರ ಸೇವೆ ಮಾಡುವುದರ ಮೂಲಕ ದೇವರನ್ನು ಕಂಡು ಕೊಳ್ಳಬಹುದು ಎಂದಿದ್ದಾರೆ.
ಈ ಸಂದರ್ಭದಲ್ಲಿ, ಮಾತನಾಡಿದ ಈಶ ಪ್ರಿಯ ತೀರ್ಥರು, ಅಂದು ರಾಮ ಭರತನಿಗೆ ಆಡಳಿತ ನಡೆಸುವಂತೆ ಹೇಳಿ ಕಾಡಿಗೆ ಹೋದ. ಹಾಗೆಯೇ ಹಿರಿಯ ಮಠಾಧಿಪತಿಗಳು ಈಗ ನನಗೆ ಜವಾಬ್ದಾರಿ ವಹಿಸಿದ್ದು ತುಂಬಾ ಸಂತೋಷವಾಗಿದೆ. ಎಲ್ಲರೂ ಕೀರ್ತಿಗಾಗಿ ಆಸೆ ಪಡುತ್ತಾರೆ. ಆದರೆ, ಅದಮಾರು ಮಠದ ಸ್ವಾಮೀಜಿ ಅಧಿಕಾರಾವಧಿ ಮುಗಿಯುವ ಪೂರ್ವವೇ ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಈ ನಿರ್ಧಾರ ಸಮಾಜಕ್ಕೆ ಸಂದೇಶವಾಗಲಿದೆ ಎಂದರು.