ಕುಂದಾಪುರ, ನ 11(SM): ಶೃದ್ದೆ ಮತ್ತು ಆಸಕ್ತಿ ಕೃಷಿಯಲ್ಲಿ ಯಶಸ್ಸು ಸಾಧಿಸುವ ಸುಲಭ ಮಾರ್ಗ. ಪ್ರಯೋಗಶೀಲ ಗುಣಗಳು ಕೃಷಿಯಲ್ಲಿ ಸುಸ್ಥಿರತೆ ಕಂಡುಕೊಳ್ಳಲು ಸಾಧ್ಯ ಎನ್ನುವುದಕ್ಕೆ ರಟ್ಟಾಡಿಯ ಯುವ ಕೃಷಿಕ ಹೆಗಡೆ ಅವರೇ ಸಾಕ್ಷಿ. ವಿಪರೀತ ಕೃಷಿಯ ಸಳೆತ ಅವರನ್ನು ಇವತ್ತು ಯಶಸ್ವಿ ಕೃಷಿಕನನ್ನಾಗಿಸಿದೆ. ಪರಿಶ್ರಮ, ಆತ್ಮವಿಶ್ವಾಸದಿಂದ ಪ್ರಯತ್ನ ಮಾಡಿದರೆ ಬರಡು ಭೂಮಿಯನ್ನು ಬಂಗಾರ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟವರು ಸತೀಶ ಹೆಗಡೆ.
ಸತೀಶ ಹೆಗಡೆ ಅವರ ಕೃಷಿ ವಿಶೇಷ ಎಂದರೆ ಸಮಗ್ರ ಕೃಷಿ ಮತ್ತು ಸಾಂಸ್ಥಿಕ ಕೃಷಿ. ಕೃಷಿಕ ಏಕ ರೂಪದ ಹಾಗೂ ಏಕ ಜಾತಿಯ ಕೃಷಿಯನ್ನು ಮಾಡಿ ಸೋಲು ಅನುಭವಿಸುವುದು ಸಹಜ. ಆದರೆ, ಸತೀಶ ಹೆಗಡೆಯವರ ಕೃಷಿಯಲ್ಲಿ ವೈವಿದ್ಯತೆಯಿದೆ. ವಿಭಿನ್ನ ಕೃಷಿಗಳಿವೆ. ಪ್ರಧಾನವಾಗಿ ಅಡಿಕೆ ಕೃಷಿ ಇದ್ದರೂ ಕೂಡಾ ಇಲ್ಲಿ ಹತ್ತಾರು ಜಾತಿಯ ಅಡಿಕೆ ಮರಗಳಿವೆ. ಪಶ್ಚಿಮ ಘಟ್ಟ ಭಾಗದಲ್ಲಿ ಅಪರೂಪವಾಗಿರುವ ಸಿಹಿನೀರು ಮೀನುಗಾರಿಕೆಯನ್ನೂ ಮಾಡಿ ಅವರು ಗಮನ ಸಳೆದಿದ್ದಾರೆ.
ಸತೀಶ ಹೆಗಡೆ ಅವರ ಜಮೀನಿನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಅಡಿಕೆ ಮರಗಳಿವೆ. 350ಕ್ಕೂ ಅಧಿಕ ತೆಂಗಿನ ಮರಗಳಿವೆ. ಬಾಳೆ, ಗೇರು ಮುಂತಾದ ಬೆಳೆಗಳಿವೆ. ಪಪ್ಪಾಯಿ ತೋಟವಿದೆ. ಒಟ್ಟಾರೆಯಾಗಿ ಹೋಳುವುದಾದರೆ ಮಿಶ್ರ ಕೃಷಿಯನ್ನು ಹೆಗಡೆಯವರು ಮಾಡುತ್ತಿದ್ದಾರೆ. ಸಾಂಪ್ರಾದಾಯಿಕ ಹೈನುಗಾರಿಕೆ, ನಾಟಿ ಕೋಳಿ ಸಾಕಾಣಿಕೆಯನ್ನು ಕೂಡ ಇವರು ಮಾಡುತ್ತಿದ್ದಾರೆ. ಈ ವರ್ಷ ಹೊಸದಾಗಿ ಸಿಹಿನೀರು ಮೀನು ಕೃಷಿಯನ್ನೂ ಆರಂಭಿಸಿದ್ದಾರೆ. ನಿರಂತರ ಕೃಷಿ ಸಾಧನೆಗಳ ಮೂಲಕ ಯಶಸ್ಸು ಗಳಿಸಿ, ಜಿಲ್ಲೆಯ ಗಮನ ಸೆಳೆದಿದ್ದಾರೆ.
ರಟ್ಟಾಡಿಯ ಶಿವರಾಮ ಹೆಗಡೆ ಮತ್ತು ಗುಲಾಬಿ ಹೆಗಡೆ ದಂಪತಿಗಳ ಪುತ್ರರಾಗಿ ಜನಿಸಿದ ಇವರು ಪಿಯುಸಿ ಶಿಕ್ಷಣ ಪಡೆದು, ಇಲೆಕ್ಟ್ರಿಕಲ್ ವಿಷಯದಲ್ಲಿ ಡಿಪ್ಲಮೋ ಮಾಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅವರಿಗೆ ಬಿ.ಎಸ್.ಎನ್.ಎಲ್ನಲ್ಲಿ ಕೆಲಸ ಲಭಿಸಿದರೂ ಅವರಿಗೆ ಅದರಲ್ಲಿ ತೃಪ್ತಿ ದೊರಕಲಿಲ್ಲ. ಬದಲಾಗಿ ಅವರ ಚಿಂತನೆಯಿದ್ದಿದ್ದು ಕೃಷಿಯನ್ನು ಮಾಡುವುದರಲ್ಲಿ. ಪರಂಪರಾನುಗತವಾಗಿ ಬಂದ ಕೃಷಿ ಜಮೀನನ್ನು ಅಭಿವೃದ್ದಿಗೊಳಿಸಲು ಕಂಕಣ ಬದ್ದರಾದರು. ಕೆಲಸಗಾರರು ಸಿಗದ ಸಂದರ್ಭದಲ್ಲಿ ತಾನೇ ಬೆಳಿಗ್ಗೆಯಿಂದ ಸಂಜೆಯ ತನಕ ತೋಟದಲ್ಲಿ ದುಡಿದು ಮಾರ್ಗದರ್ಶಿಯಾದರು. ಅಡಿಕೆ ತೋಟವನ್ನು ವಿಸ್ತರಣೆ ಮಾಡುತ್ತಾ ಸಾಗಿದರು. ಅಮಾಸೆಬೈಲು ಕೆಳಸುಂಕದ ಬರೆಯ ತಪ್ಪಲಲ್ಲಿ ಬಂಜರು ಭೂಮಿಯಂತಿರುವ ಪ್ರದೇಶವನ್ನು ಖರೀದಿಸಿ ಅದನ್ನು ಸಾಹಸದಿಂದ ಕೃಷಿಗೆ ಪರಿವರ್ತಿಸಿದರು.
೨೦೦೪ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ರಟ್ಟಾಡಿಯಲ್ಲಿ ಅಮಾಸೆಬೈಲು ವಲಯದಲ್ಲಿಯೇ ಪ್ರಥಮ ಪ್ರಗತಿಬಂಧು ಸ್ವಸಹಾಯ ಸಂಘವನ್ನು ಆರಂಭಿಸಿದರು. ‘ಹೆಗಡೆ ಪ್ರಗತಿ ಬಂಧು ಸ್ವಸಹಾಯ ಸಂಘ’ದ ಮೂಲಕ ಶ್ರಮ ವಿನೀಮಯದ ಮೂಲಕ ಕೃಷಿ ಅಭ್ಯುದಯಕ್ಕೆ ನಾಂದಿ ಹಾಡಿದರು. ಕೃಷಿ ಅಭಿವೃದ್ದಿ ಮತ್ತು ಪುನಶ್ಚೇತನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ನೆರವು ಪಡೆದು ಸದ್ವಿನಿಯೋಗಗೊಳಿಸಿದರು.
ಇವರ ಸಮಗ್ರ ಕೃಷಿ ಸಾಧನೆಗೆ ೨2015ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೃಷಿ ಪ್ರಶಸ್ತಿ, 2017ರಲ್ಲಿ ಕುಂದಾಪುರ ತಾಲೂಕು ಶ್ರೇಷ್ಠ ಕೃಷಿ ಪ್ರಶಸ್ತಿ, ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ ಲಭಿಸಿದೆ. 2015-2017ರ ತನಕ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂದಾಪುರ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ಸಾಹಿ ಯುವ ಕೃಷಿಕರಾಗಿರುವ ಇವರು ಕೃಷಿ ಮಾಹಿತಿದಾರರಾಗಿಯೂ ಹಲವಾರು ಕಡೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಕೃಷಿ ಲಾಭದಾಯಕವಲ್ಲ ಅನ್ನುವವರಿಗೆ ಸತೀಶ್ ಮಾರ್ಗದರ್ಶಿಯಾಗಿದ್ದಾರೆ.