ಕುಂದಾಪುರ,ನ 11 (MSP): ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟಿನ್ಗೆ ಕುಂದಾಪುದಲ್ಲಿ ಉದ್ಘಾಟನಾ ಭಾಗ್ಯ ಇಲ್ಲವೇ ಎನ್ನುವ ಸಂಶಯ ಎದುರಾಗಿದೆ. ಇಂದಿರಾ ಕ್ಯಾಂಟಿನ್ ಕುಂದಾಪುರದಲ್ಲಿ ನಿರ್ಮಾಣಗೊಂಡು ಹಲವು ತಿಂಗಳು ಕಳೆದರೂ ಕೂಡಾ ಇನ್ನೂ ಉದ್ಘಾಟನೆಯ ಭಾಗ್ಯವೇ ಬಂದಿಲ್ಲ. ಇದಕ್ಕೆ ಪ್ರಮುಖ ಕಾರಣ ಚುನಾವಣೆ. ಚುನಾವಣೆಯ ನೀತಿ ಸಂಹಿತೆಗಳಿಂದಾಗಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಹಿಂದೆ ಹಿಂದೆ ಹೋಗುತ್ತಲೇ ಇದೆ.
ಈಗಾಗಲೇ ಮೂರು ಚುನಾವಣೆಗಳ ಗ್ರಹಣ ಕುಂದಾಪುರದ ಇಂದಿರಾ ಕ್ಯಾಂಟಿನ್ಗೆ ತಗುಲಿದೆ. ಹಾಗಾಗಿ ಕುಂದಾಪುರದ ಜನತೆಗೆ ರಿಯಾಯತಿ ದರದ ಊಟೋಪಹಾರ ಗಗನ ಕುಸುಮವಾಗಿಯೇ ಉಳಿದಿದೆ. ಇಂದಿರಾ ಕ್ಯಾಂಟಿನ್ ಕಾಮಗಾರಿ ಮಾತ್ರ ವೇಗವಾಗಿಯೇ ಆರಂಭಗೊಂಡಿತ್ತು. ಏಪ್ರಿಲ್ನಲ್ಲಿ ಇನ್ನೇನು ಕಟ್ಟಡ ಕಾಮಗಾರಿ ಮುಗಿಯಿತು ಎನ್ನುವಷ್ಟರಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿ ಬಂತು. ಇದರಿಂದಾಗಿ ಕಾಮಗಾರಿ ಆರ್ಧಕ್ಕೆ ನಿಂತಿತು. ನೀತಿ ಸಂಹಿತೆ ಮುಗಿದು ಮತ್ತೆ ಕಾಮಗಾರಿ ಆರಂಭವಾಗಿ ಇನ್ನೇನು ಕಾಮಗಾರಿ ಮುಗಿದು ಇಂದಿರಾ ಕ್ಯಾಂಟಿನ್ ಆರಂಭವಾಯಿತು ಎನ್ನುವಷ್ಟರಲ್ಲಿ ಪುರಸಭೆ ಚುನಾವಣೆ ಘೋಷಣೆಯಾಯಿತು. ಮತ್ತೆ ಅಲ್ಲಿಗೆ ಸ್ಥಗಿತವಾಯಿತು. ಪುರಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೆಯಾದರೂ ಉದ್ಘಾಟನೆಯಾಗುತ್ತದೆ ಎನ್ನುವಷ್ಟರಲ್ಲಿ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯ ನೀತಿ ಸಂಹಿತೆ ಇಡೀ ಜಿಲ್ಲೆಗೆ ವ್ಯಾಪಿಸಿದ್ದರಿಂದ ಮೂರನೇ ಬಾರಿಗೂ ಸ್ಥಗಿತವಾಯಿತು. ಹೀಗೆ ಮೂರು ಚುನಾವಣಾ ಗ್ರಹಣಗಳು ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಪ್ರಧಾನ ಅಡ್ಡಿಯಾದವು.
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇಂದಿರಾ ಕ್ಯಾಂಟಿನ್ ಈಗಾಗಲೇ ಆರಂಭಗೊಂಡು ಕಾರ್ಯ ನಿರ್ವಹಿಸುತ್ತಿದ್ದರೂ ಕೂಡಾ ಕುಂದಾಪುರದಲ್ಲಿ ಮಾತ್ರ ಕಟ್ಟಡವಾಗಿ ನಿಂತುಕೊಂಡಿದೆ. ಆರಂಭದ ಭಾಗ್ಯ ಮಾತ್ರ ಇನ್ನೂ ಕೂಡಿ ಬಂದಿಲ್ಲ. ಇಂದಿರಾ ಕ್ಯಾಂಟಿನ್ ಆರಂಭವಾಗದೇ ಇರುವ ಬಗ್ಗೆ ಸಾರ್ವಜನಿಕ ವಲಯದಿಂದಲೂ ಸಾಕಷ್ಟು ಅಸಮಾಧಾನ ಕೇಳಿ ಬರುತ್ತಿದೆ. ಅಧಿಕಾರಿಗಳು ತಮ್ಮ ಅಸಾಹಾಯಕತೆಯನ್ನು ತೋರಿಸುತ್ತಿದ್ದಾರೆ.
ಕುಂದಾಪುರದ ಶಾಸ್ತ್ರೀವೃತ್ತದಲ್ಲಿಯೇ ಇಂದಿರಾ ಕ್ಯಾಂಟಿನ್ ನಿರ್ಮಾಣವಾಗಿದ್ದು, ಜನನಿಬಿಡಾದ ಪ್ರದೇಶದಲ್ಲಿಯೇ ಇದೆ. ಕುಂದಾಪುರದಲ್ಲಿ ಇಂದಿರಾ ಕ್ಯಾಂಟಿನ್ಗೆ ಒಳ್ಳೆಯ ಪ್ರತಿಕ್ರಿಯೆ ದೊರಕುವ ಸಾಧ್ಯತೆ ಇತ್ತು. ಆದರೆ ಆರಂಭವೇ ಇನ್ನೂ ಮೀನ ಮೇಷದಲ್ಲಿಯೇ ಅಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಚುನಾಣೆ ಹಾಗೂ ಚುನಾವಣೆಯ ನೀತಿ ಸಂಹೀತೆ ಮುಗಿದಿದೆ ಇನ್ನಾದರೂ ಕುಂದಾಪುರದಲ್ಲಿ ಇಂದಿರಾ ಕ್ಯಾಂಟಿನ್ಗೆ ಆರಂಭ ಭಾಗ್ಯ ಸಿಗುತ್ತದೋ ಕಾದು ನೋಡಬೇಕಾಗಿದೆ.