ಹೈದರಬಾದ್ , ನ 11 (MSP): ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಈ ಹಳ್ಳಿಯಲ್ಲಿ ಹೆಂಗಸರು ಹಗಲು ಹೊತ್ತಿನಲ್ಲಿ ನೈಟಿ ಧರಿಸಿದರೆ ಅವರಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ! ಪಶ್ಚಿಮ ಗೋದಾವರಿ ಜಿಲ್ಲೆಯ ತೋಕಲ ಪಲ್ಲಿ ಎಂಬ ಗ್ರಾಮದಲ್ಲಿ 9 ತಿಂಗಳಿಂದ ಇಂಥದ್ದೊಂದು ನಿಯಮ ಜಾರಿ ಯಲ್ಲಿದೆ.
ರಾತ್ರಿ ಹಗಲೂ ಎನ್ನದೆ ಮಹಿಳೆಯರ ನೈಟಿಯಲ್ಲಿಯೇ ತಿರುಗಾಡುವುದನ್ನು ನೋಡಿದ ಗ್ರಾಮಸ್ಥರು ಬೇಸತ್ತು ಗ್ರಾಮದ ಪುರುಷರು ಸಭೆ ನಡೆಸಿ ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಮನೆಯೊಳಗೆ ಆದರೆ ಓಕೆ, ಆದರೆ ಅಂಗಡಿಗೆ ಹೋದಾಗ, ಮಕ್ಕಳನ್ನು ಶಾಲೆಗೆ ಬಿಡಲು ಹೋದಾಗ, ಮಹಿಳಾ ಸಂಘಗಳ ಸಭೆಗಳಿಗೆ ಹೋದಾಗ..ಹೀಗೆ ಹಗಲೂ ರಾತ್ರಿ ಎನ್ನದೆ ಎಲ್ಲೆಲ್ಲೂ ನೈಟಿಯಲ್ಲೇ ಇರುವುದನ್ನು ಕಂಡ ಕೆಲವರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು .ಬಳಿಕ ಗ್ರಾಮದ ಸ್ವ-ಸಹಾಯ ಸಂಘದ ಮಹಿಳೆಯರ ಜತೆ ಚರ್ಚೆ ನಡೆಸಲಾಯಿತು. ಹೆಚ್ಚಿನವರು ನೈಟಿ ನಿಯಮ ಜಾರಿಗೆ ಸಮ್ಮತಿ ವ್ಯಕ್ತಪಡಿಸಿದರು. ನಂತರ ಡಂಗೂರ ಸಾರಿ ಗ್ರಾಮಸ್ಥರಿಗೆ ವಿಷಯ ತಿಳಿಸಲಾಯಿತು. ಗ್ರಾಮದಲ್ಲಿ 5000 ಜನಸಂಖ್ಯೆಯಿದ್ದು, ಇದರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರಿದ್ದಾರೆ.
ನಿಯಮದಂತೆ, ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಹೆಂಗಸರು ನೈಟಿ ತೊಟ್ಟು ಹೊರಬಂದರೆ ದಂಡ ಹಾಕಲಾಗುತ್ತದೆ. ದಂಡ ಕಟ್ಟದಿದ್ದರೆ ಬಹಿಷ್ಕಾರ ವಿಧಿಸಲಾಗುತ್ತದೆ. ವಿಶೇಷ ಎಂದರೆ ಹಳ್ಳಿಗರಿಗೆ ಈ ನಿಯಮ ಬೇಸರ ತಂದಿಲ್ಲ. ಕಳೆದ 9 ತಿಂಗಳಿಂದಲೂ ಈ ನಿಯಮ ಸದ್ದಿಲ್ಲದೆ ಜಾರಿಯಲ್ಲಿದ್ದರೂ ಗ್ರಾಮದಲ್ಲಿರುವ 2,500 ಮಹಿಳೆಯರ ಪೈಕಿ ಒಬ್ಬಾಕೆಯು ಇಲ್ಲಿ ದಂಡ ತೆತ್ತಿಲ್ಲ. ಬಗ್ಗೆ ತನಿಖೆ ನಡೆಸುವಂತೆ ಅನಾಮಧೇಯ ವ್ಯಕ್ತಿಯೊಬ್ಬ ಬರೆದ ಪತ್ರವೊಂದರಿಂದ ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ ಬಳಿಕವೇ ಈ ವಿಷಯ ಬಹಿರಂಗವಾಗಿದೆ.
ಮಹಿಳೆಯರ ಮೇಲೆ ಇಂತಹ ನಿರ್ಬಂಧ ಹೇರುವುದು ಕಾನೂನುಬಾಹಿರ, ಅಸಂವಿಧಾನಿಕ. ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದು ಅವರಲ್ಲಿ ಅರಿವು ಮೂಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.