ಉಪ್ಪಿನಂಗಡಿ,ನ 11 (MSP): ಅಪ್ರಾಪ್ತ ವಯಸ್ಸಿನ ಮಗಳನ್ನೇ ಸತತವಾಗಿ ಅತ್ಯಾಚಾರವೆಸಗಿದ ಆರೋಪದಲ್ಲಿ ತಂದೆಯೋರ್ವನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನೆಲ್ಯಾಡಿಯ ನಿವಾಸಿಯಾಗಿರುವ ಆರೋಪಿ ತನ್ನ ೧೭ ಹರೆಯದ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈತನ ಪತ್ನಿ ತೀರಿಕೊಂಡಿದ್ದು, ಈತನ ಮೂವರು ಮಕ್ಕಳಲ್ಲಿ ಓರ್ವಳು ಪ್ರಥಮ ಪಿಯುಸಿ ಕಲಿಯುತ್ತಿದ್ದು, ಹಾಸ್ಟೆಲ್ ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಈಕೆ ಒಂಬತ್ತನೇ ತರಗತಿಯಲ್ಲಿರುವಾಗಲೇ ಈತ ಈಕೆಯನ್ನು ಬೆದರಿಸಿ ಅತ್ಯಾಚಾರ ನಡೆಸಿದ್ದ. ಆದರೆ ಈ ಬಾಲಕಿ ಭಯದಿಂದ ಬಾಯ್ಬಿಟ್ಟಿರಲಿಲ್ಲ. ಇತ್ತೀಚೆಗೆ ಹಾಸ್ಟೆಲ್ ನಲ್ಲಿ ಮಕ್ಕಳಿಗೆ ಕೌನ್ಸಿಲಿಂಗ್ ನಡೆದಾಗ , ತನ್ನ ಕಾಮುಕ ತಂದೆಯ ಅತ್ಯಾಚಾರ ಪ್ರಕರಣವನ್ನು ಬಾಲಕಿ ಬಾಯ್ಬಿಟ್ಟಿದ್ದಳು. ದೀಪಾವಳಿ ರಜೆಯ ಮೇಲೆ ಮನೆಗೆ ತೆರಳಿದ್ದ ಸಂದರ್ಭವೂ ತಂದೆ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ.