ಬೆಂಗಳೂರು, ನ 12( MSP): ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಹೆಚ್ ಎನ್ ಅನಂತ್ ಕುಮಾರ್ ಅವರ ನಿಧನದ ಹಿನ್ನಲೆಯಲ್ಲಿ ಸೋಮವಾರ ರಾಜ್ಯಾದ್ಯಾಂತ ಸರ್ಕಾರಿ ರಜೆ ಘೋಷಿಸಲಾಗಿದ್ದು, ಆ ಪ್ರಕಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶೋಕಾಚರಣೆಯ ಹಿನ್ನಲೆಯಲ್ಲಿ ನಿಗದಿಯಾಗಿದ್ದ ಸೋಮವಾರದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಕೂಡಾ ರದ್ದು ಪಡಿಸಲಾಗಿದೆ. ಜತೆಗೆ ಸೋಮವಾರ ನಡೆಯಬೇಕಾಗಿದ್ದ ಹಲವು ಮಾದರಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಅನಾರೋಗ್ಯದ ಹಿನ್ನಲೆಯಲ್ಲಿ ಸೋಮವಾರ ಬೆಳಗ್ಗಿನ ಜಾವ ವಿಧಿವಶರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆಗೊಳಿಸಲಾಗುತ್ತಿದೆ. ಅನಂತ ಕುಮಾರ್ ಅವರ ಅಂತಿಮಕ್ಕೆ ದೇಶದ ಹಲವೆಡೆಯಿಂದ ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಅನಂತ್ ಕುಮಾರ್ ಅವರು ಸಚಿವ ಸಂಪುಟದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಪ್ತರಾಗಿದ್ದರು. ಹೀಗಾಗಿ ಅಂತಿಮ ದರ್ಶನ ಪಡೆಯುವುದಕ್ಕೆ ಪ್ರಧಾನಿ ಮೋದಿ ಅವರು ಕೂಡಾ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಅಲ್ಲದೆ ಸಚಿವ ಸಂಪುಟದ ಹಲವು ಕೇಂದ್ರ ಸಚಿವರು ಕೂಡಾ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.