ಮುಂಬೈ, ನ 12 (MSP) : ಮಧ್ಯಪ್ರದೇಶದಲ್ಲಿ 15 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದೊಂದಿಗೆ ಕಾಂಗ್ರೆಸ್ ಇದ್ದು ಚುನಾವಣೆಗಾಗಿ ಭರ್ಜರಿ , ತಯಾರಿ ಮಾಡಿಕೊಂಡಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಮಧ್ಯಪ್ರದೇಶದಲ್ಲಿ ಶನಿವಾರವಷ್ಟೇ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರೈತರ ಸಾಲ ಮನ್ನಾ ಹಾಗೂ ಗೋಶಾಲೆ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಆದರೆ ಇದೆಲ್ಲದರ ನಡುವೆ ಕಾಂಗ್ರೆಸ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ಮದ್ಯಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ ಎಸ್ಎಸ್ ಶಾಖೆಯನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದೆ. ಅಲ್ಲದೆ ಒಂದು ವೇಳೆ ಮಧ್ಯಪ್ರದೇಶದಲ್ಲಿ 15 ವರ್ಷಗಳ ನಂತರ ಕಾಂಗ್ರೆಸ್ ಕೈಗೆ ಅಧಿಕಾರ ಚುಕ್ಕಾಣಿ ನೀಡಿದರೆ, ರಾಜ್ಯ ಸರ್ಕಾರಿ ನೌಕರರು ಆರ್ ಎಸ್ಎಸ್ ಶಾಖೆಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.
ಪ್ರತಿ ಬಾರಿಯೂ ಕಾಂಗ್ರೆಸ್ ಆರ್ ಎಸ್ಎಸ್ ಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡಿ ವಿವಾದವನ್ನು ಮೈಮೇಲೆಳೆದುಕೊಳ್ಳುತ್ತಿದ್ದು ಇತ್ತ ಕಡೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ. ಈ ಹೇಳಿಕೆಯಿಂದ ಕಾಂಗ್ರೆಸ್ ಮನಸ್ಥಿತಿ ಬಯಲಾಗಿದ್ದು ಎಂದು ಬಿಜೆಪಿ ಕಿಡಿಕಾರಿದೆ