ಉಳ್ಳಾಲ,ನ 12 (MSP): ಸುರತ್ಕಲ್ ಹೊನ್ನಕಟ್ಟೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಕುತ್ತಾರು ಸುಭಾಷ್ ನಗರ ನಿವಾಸಿ ಶೇಖರ್ ಎಂಬವರ ಪುತ್ರ ಅಕ್ಷಯ್ (24) ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೇ ಅಪಘಾತದಲ್ಲಿ ಪಾದಚಾರಿ ಹೊನ್ನಕಟ್ಟೆ ಕೋಡಿಕೆರೆಯ ನಾರಾಯಣ ಕುಲಾಲ್ ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದರು.
ಅಕ್ಷಯ್ ಅವರು ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಹೊನ್ನಕಟ್ಟೆ ಸಿಗ್ನಲ್ ಬಳಿ ರಸ್ತೆ ದಾಟುತ್ತಿದ್ದ ನಾರಾಯಣ ಎಂಬವರಿಗೆ ಢಿಕ್ಕಿ ಹೊಡೆದು ಬಳಿಕ ಬೈಕ್ ರಸ್ತೆ ವಿಭಾಜಗಕ್ಕೆ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಪಾದಚಾರಿ ನಾರಾಯಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದ ಅಕ್ಷಯ್ ಅವರನ್ನು ನಗರದ ಎ.ಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಅಕ್ಷಯ್ ನಾಲ್ವರು ಮಕ್ಕಳಲ್ಲಿ ಎರಡನೇಯ ಪುತ್ರನಾಗಿದ್ದರು. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.