ವರದಿ: ಮಾನಸ
ಮಂಗಳೂರು, ನ 12 (MSP): ಹಲವು ದಶಕಗಳ ಕಾಲ ದೇಶದ ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು, ಕೇಂದ್ರ ಸರಕಾರದಲ್ಲಿ ಹಲವು ಬಾರಿ ಸಚಿವರಾಗಿದ್ದ ಅನಂತ ಕುಮಾರ್ ಅವರು ರಾಜ್ಯದ ಕರಾವಳಿ ಪಾಲಿಗೂ ಅನನ್ಯ ಕೊಡುಗೆ ನೀಡಿದ್ದಾರೆ ಎನ್ನುವುದು ಗಮನಾರ್ಹ ವಿಚಾರ. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸುವುದು ಹಾಗೂ ಕೊಚ್ಚಿಯಿಂದ ಮಂಗಳೂರಿಗೆ ನೈಸರ್ಗಿಕ ಗ್ಯಾಸ್ ಪೈಪ್ಲೈನ್ ತರುವುದು ಅನಂತ ಕುಮಾರ್ ಅವರ ಬಹುದೊಡ್ಡ ಕನಸಾಗಿತ್ತು. ಆದರೆ, ರಾಜ್ಯದ ಈ ಎರಡು ಬಹುದೊಡ್ಡ ಯೋಜನೆಗಳ ಕಾರ್ಯರೂಪಕ್ಕೆ ತರುವ ತಮ್ಮ ಕನಸ್ಸನ್ನು ನನಸಾಗಿಸುವ ಖುಷಿಯಲ್ಲಿದ್ದ ಸಚಿವ ಅನಂತ ಕುಮಾರ್ ಮಾತ್ರ ಇನ್ನಿಲ್ಲ..!
ಹೌದು ಅನಂತ ಕುಮಾರ್ ಅವರು ಕರಾವಳಿಗಾಗಿಯೇ ಹಲವು ಕನಸುಗಳನ್ನು ಹೆಣೆದಿದ್ದರು. ಅಡಿಕೆ ಬೆಳೆಗಾರರ ರೈತರ ಪರವಾಗಿ ನಿಂತಿದ್ದ ಅನಂತ್ ಕುಮಾರ್ , ಹಲವು ಯೋಜನೆಗಳಲ್ಲಿ ಚುರುಕು ಮುಟ್ಟಿಸಲು ವಿಶೇಷ ಮುತುವರ್ಜಿ ವಹಿಸಿದ್ದರು.
ಇವುಗಳಲ್ಲಿ ನಗರ ಹೊರವಲಯದ ಗಂಜಿಮಠ ಹಾಗೂ ಗುರುಪುರದ ಸುಮಾರು 90 ಎಕ್ರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೇಂದ್ರ ಸರಕಾರದ ಬಹುನಿರೀಕ್ಷಿತ 'ಪ್ಲಾಸ್ಟಿಕ್ ಪಾರ್ಕ್' ಯೋಜನೆ ಕೂಡಾ ಒಂದು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯ ನಿಟ್ಟಿನಲ್ಲಿ ಈ ಯೋಜನೆ ಮಹತ್ವದಾಗಿತ್ತು. 2017 ರಲ್ಲಿ ಈ ಯೋಜನೆಗಾಗಿ ಗುರುಪುರ, ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗಾಗಿ ಸ್ಥಳ ಪರಿಶೀಲನೆಯಾಗಿತ್ತು. ಆದರೆ ಘೋಷಣೆಯಲ್ಲಿಯೇ ಬಾಕಿಯಾದ ಈ ಯೋಜನೆಯ ಯೋಜನೆ ಕಡತ ಸದ್ಯ ರಾಜ್ಯ ಸರಕಾರದ ಮಟ್ಟದಲ್ಲಿಯೇ ಇದೆ. ಅನಂತಕುಮಾರ್ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ಯನ್ನು ಕೊಟ್ಟಿದ್ದರು.
1 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಪ್ಲಾಸ್ಟಿಕ್ ತಯಾರಿಕೆ ಜತೆಗೆ, ಮರುಬಳಕೆ ತಂತ್ರಜ್ಞಾನಕ್ಕೂ ಒತ್ತು ನೀಡಲು ಉದ್ದೇಶಿಸಲಾಗಿತ್ತು. ಪಂಜಾಬ್ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಹಾಗೂ ಆಂಧ್ರಪ್ರದೇಶಗಳಲ್ಲಿ ಆರು ಪ್ಲಾಸ್ಟಿಕ್ ಪಾರ್ಕ್ಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿತ್ತು. ಜತೆಗೆ ಮಧ್ಯಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಅಸ್ಸಾಂಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ಗಳ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ವಿಶೇಷವೆಂದರೆ ಎಲ್ಲ ಭಾಗದ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಯೋಜನೆ ಅನುಷ್ಠಾನ ಹಂತದಲ್ಲಿದ್ದರೆ, ಮಂಗಳೂರು ಯೋಜನೆ ಇನ್ನು ಕೂಡ ಕಡತದಲ್ಲಿಯೇ ಬಾಕಿಯಾಗಿದೆ.
ಹೀಗೆ ಕರಾವಳಿಯ ಬಗ್ಗೆ ಹಲವು ಕನಸು ಕಂಡಿದ್ದ, ಅನಂತ್ ಕುಮಾರ್ ಅವರ ಕನಸಿನ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬರುವ ಮೊದಲೇ ಕಣ್ಮರೆಯಾಗಿಬಿಟ್ಟರು.