ದುಬೈ, ನ 12(SM): ಇಂದು ಮುಂಜಾನೆ ವಿಧಿವಶರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಹಿನ್ನೆಲೆ ದುಬೈಗೆ ತೆರಳಿರುವ ದೇವೇಗೌಡ ಅವರು ಅಲ್ಲಿಂದಲೇ ಅಗಲಿದ ತಮ್ಮ ರಾಜಕೀಯ ಕಿರಿಯ ಮಿತ್ರನಿಗಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಕಳುಹಿಸಿದ್ದಾರೆ.
ಅನಂತ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ನುಡಿಯನ್ನು ಆಡಿ ಅದರ ವಿಡಿಯೋ ಸಂದೇಶವನ್ನು ಕಳುಹಿಸಿರುವ ದೇವೇಗೌಡ ಅವರು, ಅನಂತ್ ಕುಮಾರ್ ಅವರನ್ನು ರಾಜಕೀಯ ಮುತ್ಸದ್ಧಿ ಎಂದು ಬಣ್ಣಿಸಿದ್ದಾರೆ.
ನಾನು ದುಬೈಗೆ ಬರುವ ಮುಂಚೆ ಅನಂತ್ ಕುಮಾರ್ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ ಅವರು ತೀವ್ರ ನಿಗಾ ಘಟಕದಲ್ಲಿ ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಅಲ್ಲದೆ ಅವರು ತಮ್ಮ ಆರೋಗ್ಯದ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.
'ನಾನು ಪ್ರಧಾನಮಂತ್ರಿಯಾಗಿದ್ದಾಗ ಅನಂತ್ಕುಮಾರ್ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಅವರು ಅಡ್ವಾಣಿ ಅವರ ನೆಚ್ಚಿನ ಶಿಷ್ಯರಾಗಿದ್ದರು. ಅಡ್ವಾಣಿ ಅವರು ಬಿಜೆಪಿ ಕಟ್ಟುವ ಯಾತ್ರೆಯಲ್ಲಿ ಅನಂತ್ ಕುಮಾರ್ ಅವರೂ ಸೇರಿಕೊಂಡಿದ್ದರು ಎಂದು ದೇವೇಗೌಡರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಹಲವು ಬಾರಿ ಸಚಿವರಾಗಿದ್ದ ಅವರು ಪ್ರತಿಬಾರಿ ತಮ್ಮ ಕರ್ತವ್ಯವನ್ನು ಪ್ರಮಾಣಿಕತೆಯಿಂದ ನಿರ್ವಹಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕಾಣಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅವರು ಕರ್ನಾಟಕದ ದನಿಯಾಗಿದ್ದರು. ಅವರ ಸಾವು ರಾಜ್ಯಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.