ಉಳ್ಳಾಲ, ನ 12(SM): ಬಾವಿ ನೀರಿನಲ್ಲಿ ತೈಲಾಂಶ ಪತ್ತೆಯಾದ ದೇರಳಕಟ್ಟೆಯ ಕಾನೆಕೆರೆ ಪ್ರದೇಶಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿದ್ದಾರೆ. ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷೆ ಜತೆಗೆ ಚರ್ಚಿಸಿದ ಸಚಿವರು, ಬಾವಿ ನೀರಿನ ದುರ್ವಾಸನೆ ನೋಡಿ ಪೆಟ್ರೋಲ್ ಅಂಶ ಇರುವುದಾಗಿ ತಿಳಿಸಿದರು. ಹಾಗೂ ಬಾವಿಯ ನೀರನ್ನು ಹೊರ ತೆಗೆದು ಶುಚಿಗೊಳಿಸಲು ಆದೇಶ ನೀಡಿದ್ದಾರೆ.
ಇದೇ ಸಂದರ್ಭ ಸ್ಥಳೀಯರು ಬಾವಿ ನೀರಿಗೆ ಬೆಂಕಿ ಇಟ್ಟು ನೀರಿನಲ್ಲಿರುವ ತೈಲಾಂಶವಿರುವ ಬಗ್ಗೆ ಸಚಿವರ ಗಮನಕ್ಕೆ ತಂದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀರಿನಲ್ಲಿರುವ ತೈಲಾಂಶ ಪತ್ತೆಗಾಗಿ ಎನ್. ಐ.ಟಿ.ಕೆ, ಎಂಆರ್ ಪಿಎಲ್ ಮುಖಾಂತರ ಉತ್ತಮ ಏಜೆನ್ಸಿಯನ್ನು ಸಂಪರ್ಕಿಸಿ ಅತ್ಯುತ್ತಮ ತಜ್ಞರಿಗೆ ಪರೀಕ್ಷೆಗೆ ಕಳುಹಿಸಲು ಸೂಚಿಸಲಾಗಿದೆ.
ತೈಲಾಂಶ ಪತ್ತೆಯಾದ ಮೂರು ಬಾವಿಗಳ ನೀರು ಸಂಪೂರ್ಣ ಹೊರತೆಗೆದು ಸ್ವಚ್ಛಗೊಳಿಸಿ, ಮರು ಶೇಖರಣೆಯಾಗುವ ನೀರಿನಲ್ಲಿ ತೈಲದ ಅಂಶ ಇರುತ್ತದೋ ಅನ್ನುವುದನ್ನು ಪತ್ತೆಹಚ್ಚಬೇಕಾಗಿದೆ ಎಂದರು. ಇನ್ನು ಸ್ಥಳೀಯರಿಗೆ ಕುಡಿಯುವ ನೀರಿನ ಕೊರತೆಯಾಗದ ಹಾಗೆ ಗ್ರಾಮ ಪಂಚಾಯಿತಿ ವಿಶೇಷವಾಗಿ ಒಂದು ಗಂಟೆ ನೀರು ಪೂರೈಸುತ್ತಿದೆ.
ಜಿಲ್ಲಾ ಪಂಚಾಯಿತಿ ಅಭಿಯಂತರರಿಗೂ ಸ್ಥಳದಲ್ಲಿ ಕೊಳವೆಬಾವಿ ನಿರ್ಮಾಣಕ್ಕೆ ಜಾಗ ನೋಡುವಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ತ್ಯಾಜ್ಯ ನೀರಿನ ಸಮಸ್ಯೆಯೂ ಅಧಿಕವಾಗಿದ್ದು, ಈ ಕುರಿತ ವರದಿಯನ್ನು ಪಂಚಾಯಿತಿ ಆಡಳಿತ ಜಿಲ್ಲಾಧಿಕಾರಿಗೆ ನೀಡುವಂತೆ ಸೂಚಿಸಲಾಗಿದೆ ಎಂದರು. ಸಚಿವರೊಂದಿಗೆ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.