ಉಡುಪಿ, ನ 12(SM): ಅನಂತಕುಮಾರ್ ದೇಶ ಕಂಡ ಧೀಮಂತ ಸಂಸದೀಯ ಮತ್ತು ಸಂಪನ್ನ ನಾಯಕ. ಇವರು ತಮ್ಮ ಸಹಜ ಗುಣಗಳಿಂದಲೇ ದೇಶದ ಉನ್ನತಸ್ತರದ ನಾಯಕರ ಪಂಕ್ತಿಯಲ್ಲಿ ಸ್ಥಾನವನ್ನು ಸಂಪಾದಿಸಿದವರು. ಪ್ರಪಂಚವೇ ಕೊಂಡಾಡಿದ ಶ್ರೀಅಟಲ್ ಬಿಹಾರಿ ವಾಜಪೇಯಿಯವರ ಮಂತ್ರಿಮಂಡಲದಲ್ಲಿಯೂ ಮತ್ತು ಪ್ರಸ್ತುತ ನರೇಂದ್ರಮೋದಿಯವರ ಸಂಪುಟದಲ್ಲಿಯೂ ಪ್ರಭಾವಶಾಲಿಯಾದ ಮಂತ್ರಿಪದವಿಯನ್ನು ಹೊಂದಿದ್ದವರು ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಮತ್ತು ಸಂಸದೀಯ ವ್ಯವಹಾರಗಳ ಸಂಪುಟ ದರ್ಜೆಯ ಸಚಿವರಾಗಿದ್ದವರು. ದೇಶದಲ್ಲಿ ಹಿಂದೆಲ್ಲ ಕಂಡು ಬರುತ್ತಿದ್ದ ಗೊಬ್ಬರದ ಅಭಾವವು ಇವರು ಮಂತ್ರಿಗಳಾದ ಬಳಿಕ ರಸಗೊಬ್ಬರದ ಅಭಾವ ದೇಶಕ್ಕೆ ಎದುರಾಗಲಿಲ್ಲ. ಸಾಮಾಜಿಕ ಕಾರ್ಯಗಳಲ್ಲಿಯೂ ಕೂಡ ಅನಂತಕುಮಾರ ಇವರದ್ದು ಮುಂಚೂಣಿಯಲ್ಲಿದ್ದ ಹೆಸರು. ಅದಮ್ಯಚೇತನ ಸಂಸ್ಥೆಯ ಮೂಲಕ ಬೆಂಗಳೂರಿನ ಅನೇಕ ಪ್ರದೇಶಗಳ ಬಡಮಕ್ಕಳಿಗೆ ಆಶಾಕಿರಣವಾಗಿದ್ದರು.
ಇವರ ಅಕಾಲಿಕ ನಿಧನದ ಸುದ್ದಿ ಕೇಳಿ ನಮಗೆ ಸಂತಾಪವಾಗಿದೆ. ದೇಶವು ಅದರಲ್ಲೂ ವಿಪ್ರವರ್ಗವು ಓರ್ವ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಅಗಲಿದ ಆತ್ಮಕ್ಕೆ ಭಗವಂತನು ಶಾಂತಿಯನ್ನು ನೀಡಲಿ. ಇವರ ನಿಧನದಿಂದಾದ ಶೋಕವನ್ನು ಭಗವಂತನು ಕಡಿಮೆ ಮಾಡಿ, ಇವರ ಸಾಧನೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಇವರ ಕುಟುಂಬವರ್ಗದವರಿಗೆ ಶಕ್ತಿಯನ್ನು ನೀಡಲಿ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ.