ಸುಳ್ಯ, ನ 13(MSP): ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪೆಲತ್ತಡಿ ಎಂಬಲ್ಲಿ ತಲೆ ಎತ್ತಿರುವ ಮದ್ಯದಂಗಡಿ ವಿರುದ್ದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮದ್ಯದಂಗಡಿ ತೆರವಿಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಮದ್ಯದಂಗಡಿ ಬಗ್ಗೆ ಚರ್ಚಿಸಲು ನ. 16ರಂದು ಅಜ್ಜಾವರ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆಯನ್ನು ಕರೆದು ಬಳಿಕ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನೆಯಲ್ಲಿ ನಿರ್ಧರಿಸಿಲಾಯಿತು.
ಅಜ್ಜಾವರ ಗ್ರಾಮ ಪಂಚಾಯಿತಿ ಎದುರು ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಧನಂಜಯ ಅಡ್ಪಂಗಾಯ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪಣತೊಡುತ್ತಿರುವ ಈ ಸಂದರ್ಭದಲ್ಲಿ ಗ್ರಾಮದಲ್ಲಿ ಮದ್ಯದಂಗಡಿಯನ್ನು ತೆರೆದು ಆಶಾಂತಿ ಉಂಟು ಮಾಡಲು ಯತ್ನ ಮಾಡುತ್ತಿರುವುದು ಖಂಡನೀಯ. ಆರೋಗ್ಯವಂತ ಸಮಾಜಕ್ಕೆ ಮದ್ಯದಂಗಡಿಗಳು ಅಪಾಯಕಾರಿ. ಇದರಿಂದ ಗ್ರಾಮ, ತಾಲೂಕಿನ ಅಭಿವೃದ್ದಿ ಕುಂಠಿತಗೊಳ್ಳುತ್ತದೆ. ಮಗ್ಧ ಜನರನ್ನು ಬಲಿಯಲು ನಾವು ಬಿಡುವುದಿಲ್ಲ. ಮದ್ಯ ಮುಕ್ತ ಗ್ರಾಮ ನಮ್ಮ ಕಲ್ಪನೆ. ಕೂಡಲೇ ಈ ಅಂಗಡಿಯನ್ನು ತೆರವು ಮಾಡಬೇಕು ಇಲ್ಲದಿದ್ದರೆ ಗ್ರಾಮಸ್ಥರೇ ಈ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಸಭೆ ಮುಗಿದ ಬಳಿಕ ಗ್ರಾಮ ಪಂಚಾಯಿತಿ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಗ್ರಾಮಸ್ಥರು ಪೆಲತ್ತಡಿಯ ಮದ್ಯದಂಗಡಿ ಎದುರು ಸೇರಿ ಮದ್ಯದಂಗಡಿ ತೆರವುಗೊಳಿಸಲು ಆಗ್ರಹಿಸಿ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಮದ್ಯದಂಗಡಿ ಎದುರೇ ಪೋಲಿಸರು ತಡೆದರು. ಈ ವೇಳೆ ಗ್ರಾಮಸ್ಥರು ಮತ್ತು ಪೋಲಿಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ, ತಹಸೀಲ್ದಾರ್, ಅಬಕಾರಿ ಇಲಾಖೆಯವರು ಬರದೇ ನಾವು ಸ್ಥಳ ಬಿಟ್ಟು ಕದಲುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಮದ್ಯದಂಗಡಿಯನ್ನು ತೆರವು ಗೊಳಿಸಲು ಕಾನೂನಿನಲ್ಲಿ ಅವಕಾಶ ಇದೆ ಹಾಗೆಯೇ ನಡೆದುಕೊಳ್ಳಿ ಬಲತ್ಕಾರವಾಗಿ ನುಗ್ಗಿ ಧ್ವಂಸ ಮಾಡಿದರೆ ನಿಮ್ಮ ಮೇಲೆ ಕಾನೂನು ರೀತಿಯಲ್ಲಿಯೇ ಎಲ್ಲರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಮಹಿಳೆಯರನ್ನು ಮುಂದೆ ಹಾಕಿಕೊಂಡು ಬರುವುದು ಬೇಡ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ಅದನ್ನು ತೆರವುಗೊಳಿಸಲು ಕಂದಾಯ ಇಲಾಖೆ ಇದೆ. ನೀವು ಕಾನೂನು ಕೈಗೆತ್ತಿಕೊಳ್ಳಬೇಡಿ. ಕಾನೂನು ಕೈಗೆತ್ತಿಕೊಂಡರೇ ಕಠಿಣ ಕ್ರಮಕೈಗೊಳ್ಳುತ್ತೇನೆ ಎಂದು ಸುಳ್ಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಹೇಳಿದರು.