ನ 13(MSP): ರಾಮಾಯಣದಲ್ಲಿ ಅಧಿಕಾರವನ್ನು ತ್ಯಜಿಸಿ ಶ್ರೀ ರಾಮ ಕಾಡಿಗೆ ಹೋದರೆ, ಇಂದು ಶ್ರೀರಾಮನ ಹೆಸರನ್ನು ಹೇಳಿಕೊಂಡು ಅಧಿಕಾರ ಪಡೆಯಲು ಹಾತೊರೆಯುತ್ತಿದ್ದಾರೆ. ಇದು ರಾಜಕೀಯ ಅನೈತಿಕತೆಯಾಗಿದೆ. ದೇವರು ಕೂಡಾ ಈಗ ಶೋಷಣೆಗೆ ಒಳಗಾಗುತ್ತಿದ್ದಾನೆ. ಶೋಷಣೆಗೆ ದೇವರ ಹೆಸರನ್ನೇ ಹೆಚ್ಚೆಚ್ಚು ಬಳಸಲಾಗುತ್ತಿದೆ. ನಿಜವಾದ ಭಕ್ತಿ , ನೈಜವಾದ ರಾಜಕೀಯ ಎಲ್ಲಿದೆ ಎಂದು ಸಾಹಿತಿ ಡಾ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.
ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸೋಮವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ’ವಾಲ್ಮೀಕಿ ರಾಮಾಯಣ ಮರು ನಿರೂಪಣೆ, ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಸದ್ಯ ಶ್ರೀ ರಾಮನ ೨೫೧ ಅಡಿ ವಿಗ್ರಹ ಸ್ಥಾಪನೆಯಾಗಬೇಕು ಎಂಬ ಚರ್ಚೆಯಾಗುತ್ತಿದೆಯೇ ಹೊರತು ಶ್ರೀ ರಾಮನ ನೈತಿಕತೆ, ಭರತನ ಆಡಳಿತ ಹಾಗೂ ಸೀತೆಯ ಸಹಿಷ್ಟುತೆ ಕುರಿತು ಚರ್ಚೆಯಾಗುತ್ತಿಲ್ಲ. ಶ್ರೀರಾಮನನ್ನು ಕೇವಲ ಮತಬೇಟೆಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಮಾಯಾಣವನ್ನು ಪಕ್ಷ ಸಾಂಸ್ಕೃತಿಕ, ಸಾಮಾಜಿಕ ರಾಜಕೀಯ ಕೃತಿಗೆ ಬಳಸಲಾಗುತ್ತಿದೆ. ಇದರಿಂದ ಅದರ ಒಳ ಅರ್ಥವನ್ನು ಯಾರೂ ತಿಳಿದುಕೊಳ್ಳುತ್ತಿಲ್ಲ. ಈ ಕೃತಿಯನ್ನು ಸಾಹಿತ್ಯಕವಾಗಿ ನೋಡಬೇಕೆ ಹೊರತು ಮತಬೇಟೆಗೆ ಅಲ್ಲ ಎಂದರು.
ಶ್ರೀರಾಮ ಕೈಗೆ ಬಿಲ್ಲನ್ನು ನೀಡಿ ನಿಲ್ಲಿಸಿ , ಪುರುಷ ಪ್ರಧಾನ ರಾಜಕಾರಣ ಮಾಡಲಾಗುತ್ತಿದೆ. ಅದು ಮತಕ್ಕಾಗಿ ಮಾತ್ರ. ಇದು ಜನರ ನಂಬಿಕೆಗೆ ಮಾಡುವಂಥ ಅನ್ಯಾಯ .ಸೀತೆಯನ್ನು ಬಿಟ್ಟು ರಾಮನನ್ನು ಕಲ್ಪಿಸಿಕೊಳ್ಳಲ್ಲು ಸಾಧ್ಯವಿಲ್ಲ. ವನವಾಸದಲ್ಲಿ ಗಂಡನ ಜತ್ರ್ಯಾಗಿ ಲವಕುಶರಿಗೆ ತಾಯಿಯಾಗಿ ಕಷ್ಟಸಹಿಷ್ಣುತೆಯ ಪ್ರತಿರೂಪವಾಗಿದ್ದಾಳೆ ಎಂದು ಹೇಳಿದರು.