ನವದೆಹಲಿ, ನ 13 (MSP): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ವಿಜಯ ಯಾತ್ರೆ ಮುಂದುವರಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮಾನವೀಯತೆ ಮೆರೆದು ಭಾರತದವಷ್ಟೇ ಅಲ್ಲದೆ ಪಾಕ್ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪಂದ್ಯದ ವೇಳೆ ಮೈದಾನದಲ್ಲೇ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಹರ್ಮನ್ ಪ್ರೀತ್ ಕೌರ್ ಎತ್ತಿಕೊಂಡು ಸಿಬ್ಬಂದಿಗೆ ಒಪ್ಪಿಸಿ ಎಲ್ಲರಿಂದಲೂ ಪ್ರಶಂಶೆಗೆ ಪಾತ್ರರಾಗಿದ್ದಾರೆ.
ನಿಯಮದಂತೆ ಪಂದ್ಯ ಪ್ರಾರಂಭಕ್ಕೆ ಮೊದಲು ಉಭಯ ದೇಶಗಳ ರಾಷ್ಟ್ರಗೀತೆ ಮೊಳಗಿಸಲಾಯಿತು. ಈ ವೇಳೆ ಮೆಸ್ಕಾಟ್ ಆಗಿದ್ದ ಪುಟಾಣಿ ಬಾಲಕಿ ರಾಷ್ಟ್ರಗೀತೆ ಮೊಳಗಿದಾಗ ಆಟಗಾರ್ತಿ ಕೌರ್ ಕಿವಿ ಬಳಿ ಏನೋ ಪಿಸುಗುಟ್ಟಿದ್ದರು. ಬಳಿಕ ರಾಷ್ಟ್ರಗೀತೆ ಮುಗಿಯುವವರೆಗೆ ಆಕೆಯನ್ನು ಒಂದು ಕೈಯಿಂದ ಬಳಸಿಕೊಂಡು ನಿಂತಿದ್ದರು. ರಾಷ್ಟ್ರಗೀತೆ ಮುಗಿದ ಬಳಿಕ ಪುಟ್ಟ ಬಾಲಕಿ ಅಸ್ವಸ್ಥಳಾಗಿದ್ದಳು ಎನ್ನುವುದು ತಿಳಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಕಾರಣ ಬಾಲಕಿ ತನಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದಾಗ ಕೌರ್ ತನ್ನ ತೋಳಿನಿಂದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಅಧಿಕಾರಿಗಳ ಕೈಗೆ ಒಪ್ಪಿಸಿದರು. ಮೈದಾನದಲ್ಲಿ ಬಾಲಕಿಯನ್ನು ಕೌರ್ ಎತ್ತಿಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೌರ್ ಮಾನವೀಯತೆಗೆ ಶ್ಲಾಘನೆ ವ್ಯಕ್ತವಾಗಿದೆ. ಹರ್ಮನ್ ಪ್ರೀತ್ ಕಾರ್ಯಕ್ಕೆ ಅಭಿಮಾನಿಗಳು ಮೈದಾನದಲ್ಲೇ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಶತಕ(103)ಬಾರಿಸಿದ್ದಾರೆ. ಟಿ20 ಪಂದ್ಯದಲ್ಲಿ ಶತಕ ಭಾರಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟಿಗರು ಆಗಿದ್ದಾರೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಭಾರತ, ನ್ಯೂಜಿಲೆಂಡ್,ಮತ್ತು ಪಾಕಿಸ್ತಾನ ವಿರುದ್ದ ಭರ್ಜರಿ ಜಯ ಗಳಿಸಿದೆ. ಇನ್ನು ಮುಂದಿನ ಪಂದ್ಯ ಐರ್ಲ್ಯಾಂಡ್ ಹಾಗೂ ಅಸ್ಟ್ರೇಲಿಯ ವಿರುದ್ದ ನಡೆಯಲಿದೆ