ಬೆಂಗಳೂರು,ನ 13(MSP): ಬಿಜೆಪಿಯ ದಿಗ್ಗಜ, ಜಾಣ ತಂತ್ರಗಾರ, ಚತುರ ವಾಗ್ಮಿ, ಅತ್ಯುತ್ಸಾಹಿ ರಾಜಕಾರಣಿ, ಸೋಲಿಲ್ಲದ ಸರದಾರ ಕೇಂದ್ರ ಸಚಿವ ಎಚ್.ಎನ್ ಅನಂತ ಕುಮಾರ್ (59) ಅವರ ಚಾಮರಾಜಪೇಟೆಯ ಹಿಂದು ರುದ್ರಭೂಮಿಯಲ್ಲಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ ಮೃತಪಟ್ಟಿದ್ದು, ಮಂಗಳವಾರದಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನ ಹಾಗೂ ಸಕಲ ಸರ್ಕಾರಿ ಗೌರವಾಧಾರಗಳೊಂದಿಗೆ ಅನಂತ್ ಅವರ ಅಂತ್ಯಸಂಸ್ಕಾರ ನೆರವೇರಿತು.
ಪುರೋಹಿತ ಶ್ರೀನಾಥ ಶರ್ಮಾ ಮಾರ್ಗದರ್ಶನದಲ್ಲಿ ಅನಂತಕುಮಾರ್ ಸೋದರ ನಂದಕುಮಾರ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸೇನಾ ಸಿಬ್ಬಂದಿ ಸರ್ಕಾರಿ ಗೌರವ ಸಲ್ಲಿಸಿದರು. ಪಕ್ಷಾತೀತವಾಗಿ ಪ್ರಮುಖ ರಾಜಕೀಯ ನಾಯಕರು, ಸಚಿವರು, ಶಾಸಕರು ಮತ್ತು ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಸೋಮವಾರ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರಮೋದಿ, ಎಲ್.ಕೆ ಅಡ್ವಾಣಿ ಸಹಿತ ಹಲವು ಗಣ್ಯರು ಆಗಮಿಸಿ ಪುಷ್ಪ ನಮನ ಸಲ್ಲಿಸಿದ್ದರು.