ಪುತ್ತೂರು, ನ 13(SM): ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗಬೇಕಾದ ಸೌಲಭ್ಯಗಳು ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೇಗೆ ನಿರುಪಯೋಗಿ ಆಗುತ್ತದೆ ಎನ್ನುವುದಕ್ಕೆ ಪುತ್ತೂರಿನಲ್ಲೊಂದು ಉದಾಹರಣೆಯಿದೆ. ಪುತ್ತೂರು ನಗರದ ಮಧ್ಯ ಭಾಗದಲ್ಲಿ ನಗರಸಭೆ ನಿರ್ಮಿಸಿರುವ ಮಕ್ಕಳ ಪಾರ್ಕ್ ಸಮರ್ಪಕ ನಿರ್ವಹಣೆಯಿಲ್ಲದೆ ಪಾಳು ಬೀಳುತ್ತಿದೆ. 13 ಲಕ್ಷ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ಈ ಪಾರ್ಕ್ ಇದೀಗ ಪುಂಡು-ಪೋಕರಿಗಳ ತಾಣವಾಗಿಯೂ ಬದಲಾಗುತ್ತಿದೆ.
ಪುತ್ತೂರು ನಗರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಮಕ್ಕಳ ಪಾರ್ಕ್ ಇತ್ತೀಚಿನ ದಿನಗಳಲ್ಲಿ ಪಾಳು ಬೀಳಲಾರಂಭಿಸಿದೆ. 2009-10 ನೇ ಸಾಲಿನಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ರಾಜೇಶ್ ಬನ್ನೂರು ಅವರ ಮುತುವರ್ಜಿಯಲ್ಲಿ ನಿರ್ಮಾಣಗೊಂಡ ಈ ಪಾರ್ಕ್ ತನ್ನ ಉದ್ಧೇಶಿತ ಗುರಿಯನ್ನು ತಲುಪುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಪಾರ್ಕ್ ನಲ್ಲಿ ಮಕ್ಕಳಿಗಾಗಿ ಗುಹೆ, ಮಕ್ಕಳ ನಾಟಕ ಹಾಗೂ ಇತರ ಕಾರ್ಯಕ್ರಮಗಳ ಆಯೋಜನೆಗಾಗಿ ಬಯಲು ರಂಗ ಮಂದಿರ ಹೀಗೆ ಎಲ್ಲವನ್ನೂ ಮಕ್ಕಳ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ.
ಆದರೆ ಪಾರ್ಕ್ ನ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಬಿಟ್ಟುಕೊಟ್ಟ ಬಳಿಕ ಬೆರಳೆಣಿಕೆಯ ಕಾರ್ಯಕ್ರಮಗಳು ಆಗಿದ್ದು ಬಿಟ್ಟರೆ ಇಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಪಾರ್ಕನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ದಿನದಿಂದ ದಿನಕ್ಕೆ ಮಕ್ಕಳಿಂದ ದೂರವಾಗಲು ಆರಂಭವಾಗಿದೆ. ಅಲ್ಲದೆ ಮಕ್ಕಳ ಜೊತೆಗೆ ಬರುತ್ತಿದ್ದ ಪೋಷಕರು ಈ ಪಾರ್ಕ್ ನ ಅವ್ಯವಸ್ಥೆಯನ್ನು ಕಂಡು ಪಾರ್ಕ್ ಗೆ ತೆರಳುವುದಕ್ಕೆ ಹಿಂಜರಿಯುತ್ತಿದ್ದಾರೆ.
ಮಕ್ಕಳಿಗಾಗಿ ಬಳಕೆಯಾಗಬೇಕಿದ್ದ ಪಾರ್ಕ್ ಇತ್ತೀಚಿನ ದಿನಗಳಲ್ಲಿ ಪುಂಡ-ಪೋಕರಿಗಳ ಕೇಂದ್ರವಾಗಿ ಬದಲಾಗುತ್ತಿದೆ. ಇಂಥ ವ್ಯಕ್ತಿಗಳಿಗೆ ಬೆಳಿಗ್ಗಿನಿಂದ ರಾತ್ರಿಯವರೆಗಿನ ಆಶ್ರಯ ಕೇಂದ್ರವಾಗಿಯೂ ಇದು ಮಾರ್ಪಟ್ಟಿದೆ. ಪಾರ್ಕ್ ತುಂಬಾ ಗಿಡಗುಂಟೆಗಳು ತುಂಬಿದ್ದು, ಇವುಗಳ ಜೊತೆಗೆ ನಾನಾ ಮಾದರಿಯ ಮದ್ಯದ ಬಾಟಲಿಗಳು ತುಂಬಿ ತುಳುಕುತ್ತಿವೆ. ಇದಲ್ಲದೆ ರಸ್ತೆ ಬದಿಯಲ್ಲಿ ಸಾಗುವ ವಾಹನ ಸವಾರರು ಕೂಡ ಮಕ್ಕಳಾ ಪಾರ್ಕ್ ಒಳಗಡೆ ತ್ಯಾಜ್ಯ ಡಂಪ್ ಮಾಡುತ್ತಿದ್ದು, ಡಂಪಿಂಗ್ ಯಾರ್ಡ್ ನಂತಾಗಿದೆ.
ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಈ ಪಾರ್ಕ್ ಹೀಗೆ ಪಾಳು ಬಿದ್ದ ಸ್ಥಿತಿಗೆ ತಲುಪಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ವಿಪರ್ಯಾಸವೆಂದರೆ ನಗರಸಭಾ ಕಛೇರಿಯಿಂದ ಕೇವಲ ಕೂಗಳತೆಯ ದೂರದಲ್ಲಿರುವ ಈ ಪಾರ್ಕ್ ನಲ್ಲಿ ಸ್ವಚ್ಛಗೊಳಿಸಲು ವಿಫಲವಾದ ನಗರಸಭೆ ಇಡೀ ಪುತ್ತೂರು ನಗರವನ್ನು ಸ್ವಚ್ಛ ಪುತ್ತೂರು ಮಾಡಲು ಹೊರಟಿರುವುದು ನಗೆಪಾಟಲಿಗೂ ಕಾರಣವಾಗಿದೆ.