ತಿರುವನಂತಪುರ, ನ 14 ( MSP): ಕೇರಳದ ಪ್ರಸಿದ್ದ ಕ್ಷೇತ್ರ ಶಬರಿಮಲೆಯಲ್ಲಿ ಎಲ್ಲಾ ವಯಸ್ಸಿನ ಪ್ರವೇಶ ವಿಚಾರವಾಗಿ ಸದ್ಯ ತಲೆದೋರಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ನವೆಂಬರ್ 15ರಂದು ಸರ್ವ ಪಕ್ಷಗಳಿಗೆ ಕೇರಳ ಸರ್ಕಾರ ಆಹ್ವಾನ ನೀಡಿದೆ.
ನವೆಂಬರ್ 17ರಿಂದ ಎರಡು ತಿಂಗಳ ಅವಧಿಯ ವಾರ್ಷಿಕ ಯಾತ್ರಾ ಋತು‘ಮಂಡಲ ಮಕರವಿಲಕ್ಕು’ ಪ್ರಾರಂಭವಾಗಲಿದ್ದು, ಈ ಸಂಬಂಧ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವುದು ಮುಖ್ಯ ಉದ್ದೇಶವಾಗಿದ್ದು ಇವುಗಳ ಕುರಿತು ಹಾಗೂ ಇತರ ಸಭೆಯಲ್ಲಿ ಚರ್ಚಿಸಲಾಗುವುದು. ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಿತಿ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡುವಂತೆ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಇದರ ಬಳಿಕ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಒಟ್ಟು 3,700 ಜನರನ್ನು ಬಂಧಿಸಿದ್ದ ಪೊಲೀಸರು, 546 ಜನರ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು . ಜೊತೆಗೆ ಸುಪ್ರೀಂ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ 49 ಪುನರ್ ಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು.‘ಮರುಪರಿಶೀಲನೆ ಕೋರಿರುವ ಎಲ್ಲ ಅರ್ಜಿಗಳನ್ನು 2019ರ ಜನವರಿ 22ರಂದು ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಂವಿಧಾನ ಪೀಠ ಹೇಳಿತು. ‘ಆದರೆ, ಸೆಪ್ಟೆಂಬರ್ 28ರ ತೀರ್ಪಿಗೆ ತಡೆ ನೀಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿತ್ತು.