ಉಳ್ಳಾಲ, ನ 14(SM): ಬೃಹತ್ ಅಂತರಾಜ್ಯ ವಾಹನ ಕಳವು ಜಾಲವನ್ನು ಪತ್ತೆ ಹಚ್ಚಿರುವ ಉಳ್ಳಾಲ ಪೊಲೀಸರು 15 ಪ್ರಕರಣಗಳನ್ನು ಬೇಧಿಸಿ ಮೂವರು ಆರೋಪಿಗಳು ಹಾಗೂ 20 ಲಕ್ಷ ರೂಪಾಯಿ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಜೇಶ್ವರ ಬಪ್ಪಾಯಿ ತೊಟ್ಟಿ ನಿವಾಸಿ ಶಾಹಿರ್(23), ಉಪ್ಪಳದ ಮೊಹಮ್ಮದ್ ಆದೀಲ್(26) ಮತ್ತು ಕಾಸರಗೋಡು ಚೆಂಗಳದ ಅಬ್ದುಲ್ ಮುನಾವರ್ ಯಾನೆ ಮುನ್ನ(21) ಬಂಧಿತರು.
ಉಳ್ಳಾಲ ಠಾಣಾ ವ್ಯಾಪ್ತಿಯ 4 ಪ್ರಕರಣಗಳ ಒಟ್ಟು ನಾಲ್ಕು ಬುಲೆಟ್ ಬೈಕ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಒಂದು ಬುಲೆಟ್ ಮತ್ತು 1 ಬೈಕ್, ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಎರಡು ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ 1 ಪ್ರಕರಣದಲ್ಲಿ ಒಂದು ಬೈಕ್ ಸೇರಿದಂತೆ ಕಳವು ನಡೆಸಿದ ಒಟ್ಟು 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಮೂವರು ಅಂತರಾಜ್ಯ ಕುಖ್ಯಾತಿ ಹೊಂದಿರುವ ದ್ವಿಚಕ್ರ ವಾಹನ ಕಳ್ಳರಾಗಿದ್ದಾರೆ. ಆರೋಪಿಗಳ ಪೈಕಿ ಅಬ್ದುಲ್ ಮುನಾವರ್ ನಗರದ ಕಾಲೇಜೊಂದರ ಬಿಬಿಎಂ ವಿದ್ಯಾರ್ಥಿ. ಈತನನ್ನು ಬಳಸಿಕೊಳ್ಳುವ ತಂಡ ಕಾಲೇಜು ಹೊರಗಡೆ ನಿಲ್ಲಿಸಲಾಗುವ ಬುಲೆಟ್ ಬೈಕುಗಳನ್ನೇ ಕಳವು ನಡೆಸುತ್ತಿದ್ದರು. ಕಳವು ನಡೆಸಿದ ವಾಹನಗಳಿಗೆ ಮಂಗಳೂರು ಸಾರಿಗೆ ಇಲಾಖೆಯ ನೋಂದಣಿ ಸಂಖ್ಯೆ ತೆಗೆದು ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿಯ ನಕಲಿ ನೋಂದಣಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಂಡು ಅದರಲ್ಲೇ ತಿರುಗಾಟ ನಡೆಸಿ ಮಾರಾಟ ಮಾಡಿದ್ದರು.
ಈ ಜಾಲದ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್ ನೇತೃತ್ವದ ಪೊಲೀಸರ ತಂಡ ಅಂತರಾಜ್ಯ ದ್ವಿಚಕ್ರ ಕಳವು ಜಾಲವನ್ನು ಬೇಧಿಸಿದ್ದಾರೆ.